ಸಾವಿನ ವದಂತಿ ನಡುವೆಯೇ ಸೇನಾ ಆಸ್ಪತ್ರೆಯಿಂದ ಮಸೂದ್ ಶಿಫ್ಟ್ !

Update: 2019-03-04 03:35 GMT

ಶ್ರೀನಗರ, ಮಾ. 4: ಭಾರತೀಯ ವಾಯುಪಡೆ ನಡೆಸಿದ ಬಾಲಾಕೋಟ್ ದಾಳಿಯಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಝರ್ ಮೃತಪಟ್ಟ ವದಂತಿಯನ್ನು ಸಂಘಟನೆ ತಳ್ಳಿಹಾಕಿದೆ. 

ಈ ಮಧ್ಯೆ ಮಸೂದ್ ನನ್ನು ರಾವಲ್ಪಿಂಡಿಯಲ್ಲಿರುವ ಸೇನಾ ಆಸ್ಪತ್ರೆಯಿಂದ ಬಹವಾಲ್‌ಪುರ ಗೋತ್ ಗನ್ನಿ ಎಂಬಲ್ಲಿರುವ ಜೈಶ್ ಶಿಬಿರಕ್ಕೆ ರವಿವಾರ ರಾತ್ರಿ  ಸ್ಥಳಾಂತರಿಸಲಾಗಿದೆ ಎಂದು ಪಾಕಿಸ್ತಾನದ ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.

ಮಸೂದ್ ನನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಿದ ಬೆನ್ನಲ್ಲೇ ಜೈಶ್ ಸಂಘಟನೆ ಪಾಕಿಸ್ತಾನ ಸರ್ಕಾರದ ವಿರುದ್ಧ ಕೆಂಡ ಕಾರಿದ್ದು, ಇಮ್ರಾನ್ ಸರ್ಕಾರ ಭಾರತ ಹಾಗೂ ಅಂತರ್ ರಾಷ್ಟ್ರೀಯ ಒತ್ತಡಕ್ಕೆ ಮಣಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮೂತ್ರಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಮಸೂದ್ ನಿಗೆ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಜೆಇಎಂ ರವಿವಾರ ಹೇಳಿಕೆ ನೀಡಿ, "ಅಝರ್ ಜೀವಂತ ಹಾಗೂ ಆರೋಗ್ಯ ಸುಧಾರಿಸಿದೆ. ಭಾರತೀಯ ವಾಯುಪಡೆ ನಮ್ಮ ತರಬೇತಿ ಕೇಂದ್ರದ ಮೇಲೆ ದಾಳಿ ಮಾಡಿರುವುದು ನಿಜ. ಆದರೆ ಇದರಿಂದ ಯಾವುದೇ ಹಾನಿ ಆಗಿಲ್ಲ. ಇಸ್ರೇಲಿ ನಿರ್ದೇಶಿತ ಕ್ಷಿಪಣಿಗಳನ್ನೊಳಗೊಂಡ ಭಾರತೀಯ ಯುದ್ಧವಿಮಾನಗಳು ನಮ್ಮ ಮೇಲೆ ದಾಳಿ ಮಾಡಿದ್ದವು ಎಂದು ಹೇಳಿಕೆ ನೀಡಿದೆ.

ಮಾಜಿ ಅಧ್ಯಕ್ಷ  ಪರ್ವೇಝ್ ಮುಷರಫ್ ಸರ್ಕಾರದ ನೀತಿಯನ್ನೇ ಇಮ್ರಾನ್ ಸರ್ಕಾರ ಕೂಡಾ ಇದೀಗ ಅನುಸರಿಸುತ್ತಿದೆ ಎಂದು ಜೆಇಎಂ ಟೀಕಿಸಿದೆ. 9/11 ದಾಳಿಯ ಬಳಿಕ ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಮುಷರಫ್, ಉಗ್ರರ ದಮನಕ್ಕೆ ಕ್ರಮ ಕೈಗೊಂಡಿದ್ದರು. "ನಮ್ಮ ವಿರೋಧಿ ದೇಶ (ಭಾರತ)ದ ಬಗ್ಗೆ ಮೆದು ಧೋರಣೆ ಹೊಂದಿರುವ ಸರ್ಕಾರ  ಜೈಶ್ ಬಗ್ಗೆ ಕಠಿಣ ನಿಲುವು ತಾಳುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News