ಚೀನಾದಲ್ಲಿ ಕೃತಕ ಬುದ್ಧಿಮತ್ತೆಯ ಮಹಿಳಾ ಸುದ್ದಿ ನಿರೂಪಕಿ

Update: 2019-03-04 14:29 GMT

ಸಿಂಗಾಪುರ, ಮಾ. 4: ಚೀನಾದ ಸರಕಾರಿ ಸುದ್ದಿ ಸಂಸ್ಥೆ ಕ್ಸಿನುವಾ ರವಿವಾರ ಮಹಿಳೆಯಂತೆ ಕಾಣುವ ಕೃತಕ ಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್)ಯ ರೋಬೊಟ್ ಸುದ್ದಿ ನಿರೂಪಕಿಯನ್ನು ಪರಿಚಯಿಸಿದೆ. ಮಾನವ ಮುಖದ ಅಭಿವ್ಯಕ್ತಿಗಳು ಮತ್ತು ಹಾವ-ಭಾವಗಳನ್ನು ಅನುಕರಣೆ ಮಾಡುವ ಈ ರೋಬೊಟ್ ನಿರೂಪಕಿಯು, ಚೀನಾದ ವಾರ್ಷಿಕ ಸಂಸತ್ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರತಿನಿಧಿಗಳ ಕುರಿತ ಸುದ್ದಿಯೊಂದನ್ನು ನಿರೂಪಿಸಿದೆ.

ಕ್ಸಿನುವಾದ ಒಂದು ನಿಮಿಷದ ವೀಡಿಯೊದಲ್ಲಿ ಕಂಡುಬಂದ ‘ಕ್ಸಿನ್ ಕ್ಸಿಯಾವೊಮೆಂಗ್’ ಎಂಬ ಹೆಸರಿನ ರೋಬೊಟ್ ಗಿಡ್ಡ ತಲೆಗೂದಲನ್ನು ಹೊಂದಿತ್ತು ಹಾಗೂ ಗುಲಾಬಿ ಬಣ್ಣದ ರವಿಕೆ ಮತ್ತು ಕಿವಿಯೋಲೆಗಳನ್ನು ಧರಿಸಿತ್ತು.

ನಿರೂಪಕಿ ಕು ಮೆಂಗ್ ಅವರನ್ನು ಹೋಲುವಂತೆ ಕ್ಸಿನ್ ಕ್ಸಿಯಾವೊಮೆಂಗ್‌ನ್ನು ವಿನ್ಯಾಸಗೊಳಿಸಲಾಗಿದೆ.

ಪೂರ್ವ ಚೀನಾದ ಪಟ್ಟಣ ವೂಝೆನ್‌ನಲ್ಲಿ ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ವಿಶ್ವ ಇಂಟರ್‌ನೆಟ್ ಸಮ್ಮೇಳನದಲ್ಲಿ ಕ್ಸಿನುವಾ, ಪುರುಷರ ಆಕೃತಿಯ ಎರಡು ಕೃತಕ ಬುದ್ಧಿಮತ್ತೆ ಸುದ್ದಿ ನಿರೂಪಕರನ್ನು ಪರಿಚಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News