ಲಂಡನ್ ಏರ್‌ಪೋರ್ಟ್, ರೈಲು ನಿಲ್ದಾಣದಲ್ಲಿ ಮೂರು ಸಣ್ಣ ಬಾಂಬ್ ಪತ್ತೆ!

Update: 2019-03-06 03:41 GMT

ಲಂಡನ್, ಮಾ.6: ಲಂಡನ್‌ನ ಹೀಥ್ರೋ ವಿಮಾನ ನಿಲ್ದಾಣ ಬಳಿ ಹಾಗೂ ಇತರ ಎರಡು ಕಡೆಗಳಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪ್ಯಾಕೇಟ್‌ಗಳು ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್ ಯಾರ್ಡ್ ಭಯೋತ್ಪಾದನಾ ವಿರೋಧಿ ಪಡೆ ತೀವ್ರ ತನಿಖೆ ಆರಂಭಿಸಿದೆ.

ಈ ಸಂಬಂಧ ಯಾರನ್ನೂ ಬಂಧಿಸಿಲ್ಲ ಹಾಗೂ ಯಾವುದೇ ವಿಮಾನಯಾನಕ್ಕೆ ತೊಂದರೆಯಾಗಿಲ್ಲ. ಆದರೆ ಈ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧ ಇರಬಹುದು ಎನ್ನುವುದು ಪೊಲೀಸರ ಅಭಿಪ್ರಾಯವಾಗಿದ್ದು, ತನಿಖೆ ನಡೆದಿದೆ ಎಂದು ಮೂಲಗಳು ಹೇಳಿವೆ. ಎ4 ಗಾತ್ರದ ಬಿಳಿಯ ಅಂಚೆ ಲಕೋಟೆಗಳಲ್ಲಿ ಸ್ಫೋಟಕಗಳು ಪತ್ತೆಯಾಗಿವೆ.

ವಿಶೇಷ ಪರಿಣತ ತಜ್ಞರು ಈ ಪ್ಯಾಕೇಟ್‌ಗಳನ್ನು ಪರಿಶೀಲಿಸಿದ್ದು, ಇವುಗಳು ಪುಟ್ಟ ಐಇಡಿ ಸಾಧನಗಳಾಗಿವೆ. ಇದನ್ನು ತೆರೆದಾಗ ಲಘು ಪ್ರಮಾಣದ ಬೆಂಕಿಯನ್ನು ಹೊರಸೂಸಬಲ್ಲ ಸಾಮರ್ಥ್ಯ ಹೊಂದಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲ ಪೊಟ್ಟಣ ಹೀಥ್ರೋ ವಿಮಾನ ನಿಲ್ದಾಣ ಬಳಿಯ ಹನ್‌ಸ್ಲೋ ಸಮೀಪದ ಕಟ್ಟಡದಲ್ಲಿ ಪತ್ತೆಯಾಗಿದೆ. ಸಿಬ್ಬಂದಿ ಇದನ್ನು ತೆರೆದಿದ್ದಾರೆ. ಆಗ ಬೆಂಕಿ ಕಾಣಿಸಿಕೊಂಡಿದ್ದು, ಪ್ಯಾಕೆಟ್ ಭಾಗಶಃ ಉರಿದಿದೆ. ತಕ್ಷಣ ಸುರಕ್ಷಿತ ಸಾಧನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಜ್ಞರು ಪರಿಶೀಲನೆ ನಡೆಸಿದರು ಎಂದು ಪೊಲೀಸರು ವಿವರಿಸಿದ್ದಾರೆ.

ಈ ಅಪರಾಧ ಕೃತ್ಯದ ಬಗೆಗಿನ ತನಿಖೆಯಲ್ಲಿ ವಿಮಾನ ನಿಲ್ದಾಣ ಪೊಲೀಸರಿಗೆ ನೆರವು ನೀಡಲಿದೆ ಎಂದು ವಿಮಾನ ನಿಲ್ದಾಣ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಎರಡನೇ ಪೊಟ್ಟಣ ವಾಟರ್‌ಲೂ ರೈಲು ನಿಲ್ದಾಣದಲ್ಲಿ ಹಾಗೂ ಮೂರನೇ ಪೊಟ್ಟಣ ಲಂಡನ್ ನ್ಯೂಹ್ಯಾಮ್ ವಿಮಾನ ನಿಲ್ದಾಣದ ಸಿಟಿ ಏವಿಯೇಶನ್ ಹೌಸ್ ಬಳಿ ಪತ್ತೆಯಾಗಿದೆ. ಕಟ್ಟಡದಿಂದ ಸಿಬ್ಬಂದಿಯನ್ನು ತೆರವುಗೊಳಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News