182 ಧಾರ್ಮಿಕ ಶಾಲೆಗಳ ವಶ; 121 ಮಂದಿ ಬಂಧನ

Update: 2019-03-07 15:39 GMT

ಇಸ್ಲಾಮಾಬಾದ್, ಮಾ. 7: ನಿಷೇಧಿತ ಸಂಘಟನೆಗಳ ವಿರುದ್ಧದ ತನ್ನ ಅಭಿಯಾನದ ಭಾಗವಾಗಿ 182 ಧಾರ್ಮಿಕ ಶಾಲೆಗಳ ನಿಯಂತ್ರಣವನ್ನು ತಾನು ಪಡೆದಿರುವುದಾಗಿ ಹಾಗೂ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಸರಕಾರ ಗುರುವಾರ ಹೇಳಿದೆ.

ತುಂಬಾ ಹಿಂದೆಯೇ ರೂಪಿಸಲಾಗಿದ್ದ ಯೋಜನೆಯ ಭಾಗವಾಗಿ ಈ ದಮನ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿರುವ ಪಾಕಿಸ್ತಾನದ ಆಂತರಿಕ ಸಚಿವಾಲಯ, ಪಾಕಿಸ್ತಾನದ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳನ್ನು ನಿಯಂತ್ರಿಸುವಲ್ಲಿ ಇಸ್ಲಾಮಾಬಾದ್ ವಿಫಲವಾಗಿದೆ ಎಂಬ ಭಾರತದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಇದನ್ನು ಮಾಡಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ.

ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನದ ಮೇಲೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿರುವುದನ್ನು ಸ್ಮರಿಸಬಹುದಾಗಿದೆ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ಆತ್ಮಹತ್ಯಾ ಕಾರ್ ಬಾಂಬರ್ ಒಬ್ಬ ನಡೆಸಿದ ದಾಳಿಯಲ್ಲಿ ಕನಿಷ್ಠ 40 ಯೋಧರು ಹುತಾತ್ಮರಾಗಿರುವುದನ್ನು ಸ್ಮರಿಸಬಹುದಾಗಿದೆ. ದಾಳಿಯ ಹೊಣೆಯನ್ನು ಬಳಿಕ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಗುಂಪು ಜೈಶೆ ಮುಹಮ್ಮದ್ ವಹಿಸಿಕೊಂಡಿದೆ.

‘‘182 ಧಾರ್ಮಿಕ ಶಾಲೆಗಳ ನಿಯಂತ್ರಣ, ನಿರ್ವಹಣೆ ಮತ್ತು ಆಡಳಿತವನ್ನು ರಾಜ್ಯ ಸರಕಾರಗಳು ವಹಿಸಿಕೊಂಡಿವೆ’’ ಎಂದು ಆಂತರಿಕ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

‘‘ಕಾನೂನು ಅನುಷ್ಠಾನ ಸಂಸ್ಥೆಗಳು 121 ಮಂದಿಯನ್ನು ಇಂದು ಮುಂಜಾಗರೂಕತಾ ಬಂಧನಕ್ಕೆ ಒಳಪಡಿಸಿವೆ’’ ಎಂದು ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News