ಲೈಂಗಿಕ ದೌರ್ಜನ್ಯ ಎದುರಿಸುತ್ತಿದ್ದ ಅಧಿಕಾರಿಗೆ 244 ಕೋಟಿ ರೂ. ಪರಿಹಾರ ನೀಡಿದ್ದ ಗೂಗಲ್

Update: 2019-03-12 17:36 GMT

ಕ್ಯಾಲಿಫೋರ್ನಿಯ, ಮಾ. 12: ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ಸಂಬಂಧಿಸಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ ಗೂಗಲ್ ಅಧಿಕಾರಿ ಅಮಿತ್ ಸಿಂಘಾಲ್‌ಗೆ ಕಂಪೆನಿಯು 35 ಮಿಲಿಯ ಡಾಲರ್ (ಸುಮಾರು 244 ಕೋಟಿ ರೂಪಾಯಿ) ನಿವೃತ್ತಿ ಪರಿಹಾರ ನೀಡಿದೆ ಎನ್ನುವುದನ್ನು ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ಕಂಪೆನಿಯ ವಿರುದ್ಧ ಶೇರುದಾರರೊಬ್ಬರು ಹೂಡಿದ ಮೊಕದ್ದಮೆಯ ಭಾಗವಾಗಿ, ಈ ನಿವೃತ್ತಿ ಸೌಲಭ್ಯದ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಲೈಂಗಿಕ ದುರ್ವರ್ತನೆ ಆರೋಪ ಎದುರಿಸುತ್ತಿದ್ದ ತನ್ನ ಉದ್ಯೋಗಿಗಳಿಗೆ ಗೂಗಲ್ ಪರಿಹಾರಗಳನ್ನು ನೀಡಿದೆ ಎಂಬ ಪತ್ರಿಕಾ ವರದಿಯ ಬಳಿಕ ಈ ಮೊಕದ್ದಮೆ ದಾಖಲಿಸಲಾಗಿತ್ತು.

ಈ ಹಿಂದೆ ಗುಪ್ತವಾಗಿಡಲಾಗಿದ್ದ ಮೊಕದ್ದಮೆಯ ಕೆಲವು ಭಾಗಗಳನ್ನು ಸೋಮವಾರ ಬಹಿರಂಗಗೊಳಿಸಲಾಯಿತು. ಇದರಲ್ಲಿ ನಿರ್ದೇಶಕರ ಮಂಡಳಿ ಸಭೆಗಳ ನಿರ್ಣಯಗಳೂ ಇದ್ದವು.

ಗೂಗಲ್‌ಗೆ ರಾಜೀನಾಮೆ ನೀಡುವುದಕ್ಕಾಗಿ ಸಿಂಘಾಲ್‌ಗೆ ಎರಡು ಬಾರಿ 15 ಮಿಲಿಯ ಡಾಲರ್ ಹಾಗೂ ಒಮ್ಮೆ 5 ಮಿಲಿಯ ಡಾಲರ್ ಮೊತ್ತಗಳನ್ನು ಪಾವತಿಸಲಾಗಿತ್ತು ಎಂದು ಒಂದು ನಿರ್ಣಯದಲ್ಲಿ ಹೇಳಲಾಗಿದೆ.

ಅವರು 2016ರಲ್ಲಿ ಗೂಗಲ್ ತೊರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News