ಜರ್ಮನಿಗೆ ಹೊರಟಿದ್ದ ವಿಮಾನ ತಲುಪಿದ್ದು ಸ್ಕಾಟ್‌ಲ್ಯಾಂಡ್ ಗೆ !

Update: 2019-03-30 17:06 GMT

ಲಂಡನ್, ಮಾ. 30: ಇತ್ತೀಚೆಗೆ ಲಂಡನ್‌ನ ಸಿಟಿ ವಿಮಾನ ನಿಲ್ದಾಣದಿಂದ ಬ್ರಿಟಿಶ್ ಏರ್‌ವೇಸ್ ವಿಮಾನವೊಂದು ಜರ್ಮನಿಯ ಡಸಲ್‌ಡಾರ್ಫ್ ನಗರಕ್ಕೆಂದು ಪ್ರಯಾಣ ಆರಂಭಿಸಿತು. ಆದರೆ, ವಿಮಾನ ಹೋಗಿ ತಲುಪಿದ್ದು ಸ್ಕಾಟ್‌ಲ್ಯಾಂಡ್ ರಾಜಧಾನಿ ಎಡಿನ್‌ಬರ್ಗ್‌ಗೆ!

ತಪ್ಪಾಗಿ ನೀಡಲಾದ ಹಾರಾಟ ನಕ್ಷೆಯಿಂದಾಗಿ ಈ ತಪ್ಪು ಸಂಭವಿಸಿದೆ. ಈ ಹಾರಾಟ ನಕ್ಷೆಯನ್ನು ನೋಡಿ ವಿಮಾನವು ಎಡಿನ್‌ಬರ್ಗ್‌ಗೆ ಹೋಗಬೇಕಾಗಿದೆ ಎಂಬುದಾಗಿ ಪೈಲಟ್ ಮತ್ತು ಇತರ ವಿಮಾನ ಸಿಬ್ಬಂದಿ ಭಾವಿಸಿದ್ದರು.

ಬ್ರಿಟಿಶ್ ಏರ್‌ವೇಸ್‌ನ ಉಪಸಂಸ್ಥೆ ಬಿಎ ಸಿಟಿ ಫ್ಲೈಯರ್‌ನ ಪರವಾಗಿ ಈ ವಿಮಾನವನ್ನು ಜರ್ಮನಿಯ ಕಂಪೆನಿ ಡಬ್ಲುಡಿಎಲ್ ಲೀಸ್ ಆಧಾರದಲ್ಲಿ ನಡೆಸುತ್ತಿದೆ. ತಪ್ಪು ಹಾರಾಟ ನಕ್ಷೆಯನ್ನು ಜರ್ಮನಿಯ ಡಬ್ಲುಡಿಎಲ್ ಏವಿಯೇಶನ್‌ನ ಕಚೇರಿಗಳಲ್ಲಿ ಸಲ್ಲಿಸಲಾಗಿತ್ತು.

ಆದ ತಪ್ಪಿಗಾಗಿ ವಿಮಾನದ ಕ್ಯಾಪ್ಟನ್ ಪ್ರಯಾಣಿಕರ ಕ್ಷಮೆ ಕೋರಿದರು. ಎಡಿನ್‌ಬರ್ಗ್‌ನಲ್ಲಿ ಇಂಧನ ತುಂಬಿಸಿದ ಬಳಿಕ, ವಿಮಾನ ಡಸಲ್‌ಡಾರ್ಫ್‌ನತ್ತ ಹಾರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News