ಉಗ್ರರಿಗೆ ಆರ್ಥಿಕ ನೆರವು ಪೂರೈಕೆ ಪ್ರಕರಣ: ಪ್ರತ್ಯೇಕತಾವಾದಿ ಮುಖಂಡ ಮಿರ್ವೈಝ್ ಉಮರ್ ವಿಚಾರಣೆಗೆ ಹಾಜರು

Update: 2019-04-08 18:45 GMT

 ಹೊಸದಿಲ್ಲಿ, ಎ.8: ಉಗ್ರರಿಗೆ ಆರ್ಥಿಕ ನೆರವು ಪೂರೈಸಿದ ಪ್ರಕರಣಕ್ಕೆ ಸಂಬಂಧಿಸಿ ಸೌಮ್ಯವಾದಿ ಪ್ರತ್ಯೇಕತಾವಾದಿ ಮುಖಂಡ, ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಝ್ ಉಮರ್ ಸೋಮವಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಎದುರು ವಿಚಾರಣೆಗೆ ಹಾಜರಾದರು.

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಿರ್ವೈಝ್ ಗೆ ಭದ್ರತಾ ವ್ಯವಸ್ಥೆ ಒದಗಿಸಲಾಯಿತು. ಅಬ್ದುಲ್ ಘನಿ ಭಟ್, ಬಿಲಾಲ್ ಲೋನೆ ಹಾಗೂ ವೌಲಾನಾ ಅಬ್ಬಾಸ್ ಅನ್ಸಾರಿ ಸಹಿತ ಇತರ ಪ್ರತ್ಯೇಕತಾವಾದಿ ಮುಖಂಡರು ಜೊತೆಗಿದ್ದರು. ಎನ್‌ಐಎ ಎದುರು ವಿಚಾರಣೆಗೆ ಹಾಜರಾಗುವಂತೆ ಮಿರ್ವೈಜ್‌ಗೆ ಮಾರ್ಚ್ 11 ಮತ್ತು 18ರಂದು ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ವೈಷಮ್ಯದ ಪರಿಸ್ಥಿತಿಯ ಕಾರಣ ತನಗೆ ಭದ್ರತೆಯ ಭೀತಿಯಿದ್ದು ದಿಲ್ಲಿಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಅವರು ತಿಳಿಸಿದ್ದರು. ಕಳೆದ ವಾರ ಜಾರಿಗೊಳಿಸಿದ ಮೂರನೇ ಸಮನ್ಸ್‌ನಲ್ಲಿ ಎನ್‌ಐಎ ಭದ್ರತೆ ಒದಗಿಸುವ ಭರವಸೆ ನೀಡಿತ್ತು.

ಇದಕ್ಕೂ ಮುನ್ನ ರವಿವಾರ ರಾತ್ರಿ ನಡೆದ ಹುರಿಯತ್ ಕಾನ್ಫರೆನ್ಸ್ ಮುಖಂಡರ ಸಭೆಯಲ್ಲಿ ಮಿರ್ವೈಝ್ ಗೆ ಸಮನ್ಸ್ ನೀಡಿರುವುದನ್ನು ಖಂಡಿಸಲಾಯಿತು. ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಲಾಗುತ್ತಿದೆ ಮತ್ತು ನಾಯಕರು ತಳೆದಿರುವ ರಾಜಕೀಯ ನಿಲುವಿನ ಹಿನ್ನೆಲೆಯಲ್ಲಿ ಅವರನ್ನು ಕ್ರಿಮಿನಲ್‌ಗಳೆಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ . ಹುರಿಯತ್ ಕಾನ್ಫರೆನ್ಸ್ ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರಕ್ಕೆ ಆಗ್ರಹಿಸುತ್ತಿರುವ ರಾಜಕೀಯ ಪಕ್ಷಗಳ ವೇದಿಕೆಯಾಗಿದೆ. ಇದಕ್ಕೂ ಭಯೋತ್ಪಾದಕ ಸಂಘಟನೆಗಳಿಗೂ ಸಂಬಂಧವಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ಪಡಲಾಗಿದೆ. ತನ್ನ ಹೆಸರು ಕೆಡಿಸುವ ಏಕೈಕ ಉದ್ದೇಶದಿಂದ ತನಗೆ ಕಳಿಸಲಾಗಿರುವ ನೋಟಿಸ್‌ನಲ್ಲಿ ಕಲ್ಪಿತ ಆರೋಪ ಮತ್ತು ತಪ್ಪು ಮಾಹಿತಿ ತುಂಬಿದೆ ಎಂದು ಮಿರ್ವೈಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News