ಹಿಂದೂ ಬಾಲಕಿಯರದ್ದು ಬಲವಂತದ ಮತಾಂತರವಲ್ಲ: ಇಸ್ಲಾಮಾಬಾದ್ ಹೈಕೋರ್ಟ್

Update: 2019-04-11 18:31 GMT

ಇಸ್ಲಾಮಾಬಾದ್, ಎ. 11: ಪಾಕಿಸ್ತಾನದಲ್ಲಿ ಹದಿಹರೆಯದ ಹಿಂದೂ ಸೋದರಿಯರನ್ನು ಬಲವಂತವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳಿಸಲಾಗಿಲ್ಲ ಎಂಬುದಾಗಿ ಇಸ್ಲಾಮಾಬಾದ್ ಹೈಕೋರ್ಟ್ ಗುರುವಾರ ಹೇಳಿದೆ ಹಾಗೂ ತಮ್ಮ ಗಂಡಂದಿರೊಂದಿಗೆ ವಾಸಿಸಲು ಅವರಿಗೆ ಅನುಮತಿ ನೀಡಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ರವೀನಾ (13) ಮತ್ತು ರೀನಾ (15) ಮತ್ತು ಅವರ ಗಂಡಂದಿರು, ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾರ್ಚ್ 25ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಬಾಲಕಿಯರು ಅಪ್ರಾಪ್ತ ವಯಸ್ಕರಾಗಿದ್ದು, ಅವರನ್ನು ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಲಾಗಿದೆ ಹಾಗೂ ಬಳಿಕ ಮುಸ್ಲಿಮ್ ಪುರುಷರೊಂದಿಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂಬುದಾಗಿ ಬಾಲಕಿಯರ ತಂದೆ ಮತ್ತು ಸಹೋದರ ಆರೋಪಿಸಿದ್ದರು.

ತಾವು ಸಿಂಧ್‌ನ ಘೋಟ್ಕಿಯ ಹಿಂದೂ ಕುಟುಂಬವೊಂದರ ಸದಸ್ಯರಾಗಿದ್ದು, ಇಸ್ಲಾಮ್‌ನ ಬೋಧನೆಗಳಿಂದ ಪ್ರಭಾವಿತರಾಗಿ ಸ್ವಇಚ್ಛೆಯಿಂದ ಮತಾಂತರಗೊಂಡಿದ್ದೇವೆ ಎಂಬುದಾಗಿ ಬಾಲಕಿಯರು ತಮ್ಮ ಹೇಳಿಕೆಗಳಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ತನಿಖೆ ನಡೆಸಲು ಇಸ್ಲಾಮಾಬಾದ್ ಹೈಕೋರ್ಟ್, ಮಾನವಹಕ್ಕುಗಳ ಸಚಿವೆ ಶಿರೀನ್ ಮಝಾರಿ, ಮುಸ್ಲಿಮ್ ವಿದ್ವಾಂಸ ಮುಫ್ತಿ ತಕಿ ಉಸ್ಮಾನಿ, ಪಾಕಿಸ್ತಾನದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಮೆಹದಿ ಹಸನ್, ರಾಷ್ಟ್ರೀಯ ಮಹಿಳಾ ಸ್ಥಾನಮಾನ ಆಯೋಗದ ಅಧ್ಯಕ್ಷೆ ಖವಾರ್ ಮಮ್ತಾಝ್ ಮತ್ತು ಹಿರಿಯ ಪತ್ರಕರ್ತ ಹಾಗೂ ಮಾನವಹಕ್ಕುಗಳ ಕಾರ್ಯಕರ್ತ ಐ.ಎ. ರೆಹಮಾನ್‌ರನ್ನು ಒಳಗೊಂಡ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು.

ಈಗ, ಅದು ಬಲವಂತದ ಮತಾಂತರವಲ್ಲ ಎಂಬ ನಿರ್ಧಾರಕ್ಕೆ ಸಮಿತಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News