ಇದು ವರ್ಷದ ಅತ್ಯುತ್ತಮ ಸುದ್ದಿ ಚಿತ್ರ...

Update: 2019-04-12 03:41 GMT

ಆಮ್‌ಸ್ಟೆರ್ಡಾಮ್ (ನೆದರ್ಲೆಂಡ್ಸ್): ಅಮೆರಿಕದ ಗಡಿಯಲ್ಲಿ ಅಕ್ರಮ ವಲಸೆ ಆರೋಪದಲ್ಲಿ ತಾಯಿಯನ್ನು ಗಡಿ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಅಸಹಾಯಕ ಪುಟ್ಟ ಹೆಣ್ಣು ಮಗು ಅಳುತ್ತಿರುವ ಹೃದಯ ಕಲುಕುವ ಚಿತ್ರ ಈ ವರ್ಷದ ಅತ್ಯುತ್ತಮ ಸುದ್ದಿಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗುರುವಾರ ಈ ಚಿತ್ರಕ್ಕೆ ವರ್ಲ್ಡ್ ಪ್ರೆಸ್ ಫೋಟೊ ಪ್ರಶಸ್ತಿ ಘೋಷಿಸಲಾಗಿದೆ.

ಖ್ಯಾತ ಛಾಯಾಗ್ರಾಹಕ ಜಾನ್ ಮೂರ್ ಈ ಫೋಟೊ ಕ್ಲಿಕ್ಕಿಸಿದ್ದು, ಹೊಂಡುರಾಸ್ ದೇಶದ ಮಹಿಳೆ ಸಾಂಡ್ರಾ ಸ್ಯಾಂಚೆಸ್ ಮತ್ತು ಆಕೆಯ ಪುಟ್ಟ ಮಗಳು ಯೆನೆಲಾ ಕಳೆದ ವರ್ಷ ಅಕ್ರಮವಾಗಿ ಅಮೆರಿಕ- ಮೆಕ್ಸಿಕೊ ಗಡಿಯನ್ನು ದಾಡುವ ವೇಳೆ ಈ ಚಿತ್ರ ಸೆರೆ ಹಿಡಿದಿದ್ದರು. "ಇದು ವಿಭಿನ್ನ ಬಗೆಯ ಮಾನಸಿಕ ಹಿಂಸೆ" ಎಂದು ತೀರ್ಪುರಾರರು ಅಭಿಪ್ರಾಯಪಟ್ಟಿದ್ದಾರೆ.

ಈ ಅಸಹಾಯಕ ಮಗುವಿನ ಚಿತ್ರ ವಿಶ್ವಾದ್ಯಂತ ಪ್ರಕಟವಾಗಿತ್ತು ಹಾಗೂ ತಾಯಂದಿರಿಂದ ಸಾವಿರಾರು ಪುಟ್ಟ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ವಿವಾದಾತ್ಮಕ ನೀತಿ ವಿರುದ್ಧ ಸಾರ್ವಜನಿಕ ಆಕ್ರೋಶ ಕಟ್ಟೆಯೊಡೆಯಲು ಕಾರಣವಾಗಿತ್ತು.

ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಸುರಕ್ಷತಾ ಅಧಿಕಾರಿಗಳು ಆ ಬಳಿಕ ಹೇಳಿಕೆ ನೀಡಿ ಯೆನೆಲಾ ಹಾಗೂ ಆಕೆಯ ತಾಯಿ ಬೇರ್ಪಟ್ಟವರಲ್ಲಿ ಸೇರಿಲ್ಲ ಎಂದು ಪ್ರತಿಪಾದಿಸಿತ್ತು. ಆದರೆ ಸಾರ್ವಜನಿಕರ ಆಕ್ರೋಶದಿಂದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷದ ಜೂನ್‌ನಲ್ಲಿ ಈ ನೀತಿ ಪರಿಷ್ಕರಿಸಿದ್ದರು ಎಂದು ತೀರ್ಪುಗಾರರು ವಿವರಿಸಿದ್ದಾರೆ.

ಕಳೆದ ವರ್ಷದ ಜೂನ್ 12ರಂದು ಒಂದು ಗುಂಪು ಗಡಿ ದಾಟಿ ಬರುತ್ತಿದ್ದ ಸಂದರ್ಭದಲ್ಲಿ ಅಮೆರಿಕ ಗಡಿ ಗಸ್ತು ಏಜೆಂಟರ ಫೋಟೊಗಳನ್ನು ಅಮಾವಾಸ್ಯೆಯ ರಾತ್ರಿ ಕ್ಲಿಕ್ಕಿಸಿದ್ದರು. "ಇವರ ಮುಖಗಳಲ್ಲಿ ಮತ್ತು ಕಣ್ಣುಗಳಲ್ಲಿ ಭೀತಿ ನಿಚ್ಚಳವಾಗಿ ಕಾಣುತ್ತಿತ್ತು" ಎಂದು ಸಂದರ್ಶನವೊಂದರಲ್ಲಿ ಮೂರ್ ಹೇಳಿದ್ದರು. ಗಡಿ ದಾಟುವವರ ವಿವರಗಳನ್ನು ಅಧಿಕಾರಿಗಳು ಪಡೆಯುತ್ತಿದ್ದಾಗ, ಸಾಂಡ್ರಾ ಹಾಗೂ ಈ ಪುಟ್ಟ ಮಗು ಅಸಹಾಯಕರಾಗಿದ್ದರು. ಈ ಹಿನ್ನೆಲೆಯಲ್ಲಿ ತಾಯಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಾಗ ತಾಯಿಯಿಂದ ಬೇರ್ಪಟ್ಟ ಮಗುವಿನ ಆರ್ತನಾದ ಹೃದಯ ಕಲುಕುವಂತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News