ಪಾಕಿಸ್ತಾನಿ ಮೂಲದ ಬ್ರಿಟಿಷ್ ಸಂಸದೆಯ ಎದುರೇ ಬಸ್ಸಿನಲ್ಲಿ ಹಸ್ತಮೈಥುನ!

Update: 2019-04-13 03:48 GMT

ಲಂಡನ್, ಎ.13: ಪಾಕಿಸ್ತಾನಿ ಮೂಲದ ಬ್ರಿಟಿಷ್ ಸಂಸದೆ ನಾಝ್ ಶಾ ಅವರಿಗೆ ಕಳೆದ ವಾರ ತೀರಾ ಇರಿಸು ಮುರಿಸಿನ ಹಾಗೂ ನಾಚಿಕೆಗೇಡಿನ ಘಟನೆ ಎದುರಾಯಿತು. ಲಂಡನ್‌ನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರ ಎದುರಲ್ಲೇ ಸಹ ಪ್ರಯಾಣಿಕ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ಅಸಹ್ಯಕರ ಘಟನೆಗೆ ಅವರು ಸಾಕ್ಷಿಯಾಗಬೇಕಾಯಿತು.

ಲೇಬರ್ ಪಕ್ಷದ ನಾಯಕಿಯಾಗಿರುವ ಅವರು ಬ್ರಡ್‌ಫೋರ್ಡ್ ಪಶ್ಚಿಮ ಕ್ಷೇತ್ರದ ಸಂಸದೆ. ಎಪ್ರಿಲ್ 1ರಂದು ಬೆಳಗ್ಗೆ 10:50ಕ್ಕೆ ಕೇಂದ್ರ ಲಂಡನ್‌ನ ವೈಟ್‌ಹಾಲ್‌ಗೆ ಬಂದ ಬಳಿಕ ಅವರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

"ನನಗೆ ತೀರಾ ಆಘಾತವಾಯಿತು ಹಾಗೂ ಅಸಹ್ಯ ಎನಿಸಿತು. ಆತ ಮಾತ್ರ ಸಹಜವಾಗಿ ಕುಳಿತೇ ಇದ್ದ. ನನಗೆ ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಆದರೆ ಈ ಲೈಂಗಿಕ ದುರ್ನಡತೆ ಬಗ್ಗೆ ದೂರು ನೀಡಿದ ಬಳಿಕವೂ ಮನಸ್ಸು ಅಸಹ್ಯ ಎನಿಸುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.

"ಇಂಥ ಘಟನೆ ಎಂದೂ ಅನುಭವಕ್ಕೆ ಬಂದಿರಲಿಲ್ಲ; ಇಂಥದ್ದು ನಡೆಯಲು ಅವಕಾಶವಾಗದಂತೆ ಮಹಿಳೆಯರಿಗೆ ಅವಕಾಶ ಮಾಡಿಕೊಡಬೇಕು" ಎಂದು ಆಗ್ರಹಿಸಿರುವ ಅವರು ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇಂಥ ಲೈಂಗಿಕ ದುರ್ನಡತೆ ಘಟನೆಗಳ ಪೈಕಿ ಶೇಕಡ 90ರಷ್ಟು ವರದಿಯಾಗುವುದೇ ಇಲ್ಲ ಎಂದು ಅವರು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ. ಆದ್ದರಿಂದ ಯೂಟ್ಯೂಬ್ ವೀಡಿಯೊ ಹಂಚಿಕೊಳ್ಳಬೇಕಾಯಿತು ಎಂದು ವಿವರಿಸಿದ್ದಾರೆ.

"ಇಂಥದ್ದು ನಿಲ್ಲಬೇಕಾದರೆ ಘಟನೆ ಬಗ್ಗೆ ದೂರು ನೀಡಬೇಕು. ಏನು, ಎಲ್ಲಿ ಹಾಗೂ ಯಾವಾಗ ನಡೆದಿದೆ ಎಂದು 61016ಕ್ಕೆ ಸಂದೇಶ ನೀಡಿ ಅಥವಾ 101ಗೆ ಕರೆ ಮಾಡಿ ಎಂದು ಟ್ವಿಟ್ಟರ್ ಮೂಲಕ ಕೋರಿದ್ದಾರೆ. "ನಾನು ಬಸ್ಸಿನಿಂದ ಇಳಿಯುವಾಗ ಕೂಡಾ ಆತ ಅದೇ ಗುಂಗಿನಲ್ಲಿ ಮುಂದುವರಿದಿದ್ದ" ಎಂದು ಹೇಳಿದ್ದಾರೆ. ತಕ್ಷಣ ಚಾಲಕರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಆದರೆ ಆಗ ಆತ ಬಸ್ಸಿನಿಂದ ಇಳಿದುಹೋದ. ಲಂಡನ್ ಮೆಟ್ರೊಪಾಲಿಟನ್ ಪೊಲೀಸರ್ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News