ಮೌಂಟ್ ಎವರೆಸ್ಟ್ ಬಳಿ ವಿಮಾನ ಪತನ, ಮೂವರ ಸಾವು

Update: 2019-04-14 07:56 GMT

ಕಾಠ್ಮಂಡು,ಎ.14: ನೇಪಾಳದ ಎವರೆಸ್ಟ್ ಪ್ರದೇಶದಲ್ಲಿಯ ಏಕೈಕ ವಿಮಾನ ನಿಲ್ದಾಣದಲ್ಲಿ ರವಿವಾರ ಬೆಳಿಗ್ಗೆ ಟೇಕ್‌ಆಫ್ ಸಂದರ್ಭದಲ್ಲಿ ಸಣ್ಣ ವಿಮಾನವೊಂದು ನಿಂತಿದ್ದ ಹೆಲಿಕಾಪ್ಟರ್ ಮೇಲೆ ಪತನಗೊಂಡ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಸಮಿಟ್ ಏರ್‌ಗೆ ಸೇರಿದ ವಿಮಾನವು ಲುಕ್ಲಾದಿಂದ ಕಾಠ್ಮಂಡುಗೆ ತೆರಳಲು ಟೇಕ್ ಆಫ್ ಆಗಲು ಯತ್ನಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರನ್‌ವೇದಿಂದ ಜಾರಿದ ವಿಮಾನವು ಮನಂಗ್ ಏರ್‌ನ ಹೆಲಿಕಾಪ್ಟರ್‌ಗೆ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಎರಡೂ ಖಾಸಗಿ ವಿಮಾನಯಾನ ಸಂಸ್ಥೆಗಳಾಗಿದ್ದು, ದುರ್ಗಮ ಪ್ರದೇಶಗಳಲ್ಲಿ ಪ್ರವಾಸಿಗರು ಮತ್ತು ನೇಪಾಳಿಗಳಿಗೆ ಸೇವೆಯನ್ನೊದಗಿಸುತ್ತಿವೆ.
ಮೃತರಲ್ಲಿ ವಿಮಾನದ ಪೈಲಟ್ ಮತ್ತು ನಿಂತಿದ್ದ ಹೆಲಿಕಾಪ್ಟರ್ ಬಳಿಯಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ಕಾಠ್ಮಂಡುವಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ವಿಮಾನದಲ್ಲಿದ್ದ ನಾಲ್ವರು ಪ್ರಯಾಣಿಕರು ಮತ್ತು ಫ್ಲೈಟ್ ಅಟೆಂಡೆಂಟ್ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ವಿಮಾನ ಅಪಘಾತದ ಬಳಿಕ ಮೌಂಟ್ ಎವರೆಸ್ಟ್‌ಗೆ ಹೆಬ್ಬಾಗಿಲು ಆಗಿರುವ ಲುಕ್ಲಾದ ತೆನ್ಝಿಂಗ್ ಹಿಲರಿ ವಿಮಾನ ನಿಲ್ದಾಣದಿಂದ ಸೇವೆಗಳನ್ನು ಅಮಾನತುಗೊಳಿಸಲಾಗಿದೆ.

ಚಿಕ್ಕ ರನ್‌ವೇ ಮತ್ತು ಕಠಿಣ ಸ್ಥಿತಿಯಿಂದಾಗಿ ಈ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣವೆಂದು ಹೇಳಲಾಗಿದೆ. ಸಮುದ್ರ ಮಟ್ಟದಿಂದ 9,334 ಅಡಿ ಎತ್ತರದಲ್ಲಿರುವ ಅದು ಕೇವಲ ಹೆಲಿಕಾಪ್ಟರ್‌ಗಳು ಮತ್ತು ಸಣ್ಣ ವಿಮಾನಗಳ ಹಾರಾಟಕ್ಕೆ ಬಳಕೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News