ಧರ್ಮವನ್ನು ತಪ್ಪಾಗಿ ಕಲಿತ ಆತನ ಸಾವಿನ ಬಗ್ಗೆ ಬೇಸರವಿಲ್ಲ: ಲಂಕಾ ಶಂಕಿತ ಉಗ್ರನ ಸಹೋದರಿ

Update: 2019-04-28 08:42 GMT

ಕೊಲಂಬೊ, ಎ.28: ಆರು ಮಕ್ಕಳು ಸೇರಿದಂತೆ 15 ಮಂದಿ ಕಲಮುನೈ ಪಟ್ಟಣದಲ್ಲಿ ನಡೆದ ಆತ್ಮಹತ್ಯಾ ಬಾಂಬ್‍ ಸ್ಫೋಟದಲ್ಲಿ ಮೃತಪಟ್ಟ ಬೆನ್ನಲ್ಲೇ, ಮಿಲಿಟರಿ ಗುಪ್ತಚರ ಅಧಿಕಾರಿಗಳು ಈಸ್ಟರ್ ಸಂಡೆಯ ದಾಳಿಯ ಶಂಕಿತ ಉಗ್ರ ಝಹ್ರನ್ ಹಶೀಂನ ಸಹೋದರಿ ಮಧಾನಿಯಾ ನಿವಾಸಕ್ಕೆ ಭೇಟಿ ನೀಡಿದ್ದರು.

ಮೃತಪಟ್ಟ 15 ಮಂದಿಯ ದೇಹಗಳನ್ನು ಗುರುತಿಸುವಂತೆ ಅಧಿಕಾರಿಗಳು ಮಧಾನಿಯಾ ಹಾಗೂ ಆಕೆಯ ಪತಿ ಶರೀಫ್ ನಿಯಾಝ್ ಅವರನ್ನು ಕೇಳಿಕೊಂಡರು. "ಅವರ ಭಾವಚಿತ್ರಗಳನ್ನು ತೋರಿಸುವಂತೆ ಕೇಳಿ; ನಾನು ಆ ಘಟನೆ ನಡೆದ ಸ್ಥಳಕ್ಕೆ ಹೋಗಲಾರೆ" ಎಂದು ಮಧಾನಿಯಾ ಪತಿಯನ್ನು ಉದ್ದೇಶಿಸಿ ತಮಿಳಿನಲ್ಲಿ ಹೇಳಿದರು.

ಐಸಿಸ್ ಈ ಕೃತ್ಯ ಎಸಗುವಂತೆ ಸಹೋದರನ ಮೇಲೆ ಪ್ರಭಾವ ಬೀರಿದೆ ಎಂಬ ಬಗ್ಗೆ ತನಗೇನೂ ತಿಳಿಯದು ಎಂದು ಮಧಾನಿಯಾ ಸ್ಪಷ್ಟಪಡಿಸಿದರು. "ಆತನ ಭಾಷಣದಲ್ಲಿ ದ್ವೇಷದ ಅಂಶಗಳು ಕಂಡುಬಂದ ತಕ್ಷಣ 2017ರಲ್ಲೇ ನಾವು ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆವು. ಸರ್ಕಾರ, ರಾಷ್ಟ್ರಧ್ವಜ, ಚುನಾವಣೆ ಮತ್ತು ಇತರ ಧರ್ಮಗಳ ವಿರುದ್ಧ ಆತ ಬೋಧಿಸಲು ಆರಂಭಿಸಿದ್ದನ್ನು ನಾನು ಒಪ್ಪುವುದಿಲ್ಲ. ಆತ ಇಡೀ ಕುಟುಂಬಕ್ಕೆ ಅಪಾಯ ಆಹ್ವಾನಿಸಿಕೊಂಡ" ಎಂದು ಪ್ರತಿಕ್ರಿಯಿಸಿದರು.

"ಇತರ ಧರ್ಮಗಳ ಬಗ್ಗೆ ಹಾಗೂ ಸೌಮ್ಯವಾದಿ ಮುಸ್ಲಿಮರ ವಿರುದ್ಧ ಆತ ಅಭಿಪ್ರಾಯ ಹೊಂದಿದ್ದ. ಇಸ್ಲಾಂ ಧರ್ಮದ ಬಗ್ಗೆ ಆತ ತನ್ನದೇ ವಿಶ್ಲೇಷಣೆ ಮಾಡುತ್ತಿದ್ದ. ಆತ ಅಪಾಯಕಾರಿ ದಿಕ್ಕಿನಲ್ಲಿ ತೆರಳುತ್ತಿದ್ದಾನೆ ಎಂದು ಗೊತ್ತಾದ ತಕ್ಷಣ ನಾವು ದೂರವಾದೆವು" ಎಂದು ಹೇಳಿದರು. ತಪ್ಪು ವ್ಯಕ್ತಿಗಳಿಂದ ಧರ್ಮದ ಬಗ್ಗೆ ತಿಳಿದುಕೊಂಡ ಆತ ಸತ್ತ ಬಗ್ಗೆ ಯಾವ ಬೇಸರವೂ ಇಲ್ಲ ಎಂದು ಮಧಾನಿಯಾ ಹೇಳುತ್ತಾರೆ.

“ತಪ್ಪು ಜನರಿಂದ ತಪ್ಪು ಹದೀಸ್ ಗಳನ್ನು ಕಲಿತ ಆತ ದೇವರನ್ನು ಕಳೆದುಕೊಂಡ. ಅವನು ಜೀವಂತವಿಲ್ಲ ಎನ್ನುವ ಬಗ್ಗೆ ನನಗೆ ಸಂತೋಷವಿದೆ” ಎಂದು ಮಧಾನಿಯಾ ಹೇಳಿದ್ದಾರೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News