ಇಂಡೊನೇಶ್ಯದ ಮಳೆಯ ಆರ್ಭಟಕ್ಕೆ ಕನಿಷ್ಠ 10 ಬಲಿ

Update: 2019-04-28 17:23 GMT

ಜಕಾರ್ತ,ಎ.28: ಇಂಡೊನೇಶ್ಯದ ದ್ವೀಪ ಸುಮಾತ್ರದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತಗಳಿಂದಾಗಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದೆ.

ಪ್ರವಾಹಪೀಡಿತ ಪ್ರದೇಶಗಳಿಂದ 12 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಸುಮಾತ್ರ ದ್ವೀಪದ ಬೆಂಗ್‌ಕುಲು ಪ್ರಾಂತದ ಒಂಭತ್ತು ಜಿಲ್ಲೆಗಳಲ್ಲಿ ಭೀಕರ ಪ್ರವಾಹಪರಿಸ್ಥಿತಿ ಉಂಟಾಗಿದ್ದು, ಹಲವಾರು ಕಟ್ಟಡಗಳು,ಸೇತುವೆಗಳು ಹಾಗೂ ರಸ್ತೆಗಳಿಗೆ ಹಾನಿಯಾಗಿದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಹ ಇಳಿಮುಖಗೊಂಡಿದೆಯಾದರೂ, ಕೆಲವು ಪ್ರದೇಶಗಳು ಸಂಪೂರ್ಣವಾಗಿ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡಿರುವುದರಿಂದ ಮಳೆಯಿಂದಾಗಿ ಉಂಟಾಗಿರುವ ಸಂಪೂರ್ಣ ಹಾನಿಯ ಪ್ರಮಾಣವನ್ನು ಇನ್ನೂ ಅಂದಾಜಿಸಲು ಸಾಧ್ಯವಾಗಿಲ್ಲವೆಂದು ಅವರು ಹೇಳಿದ್ದಾರೆ.

ಹಲವೆಡೆ ನದಿಗಳು ದಡಗಳನ್ನು ಮೀರಿ ಉಕ್ಕಿ ಹರಿಯುತ್ತಿದ್ದು, ಅಸುಪಾಸಿನಲ್ಲಿರುವ ವಸತಿಪ್ರದೇಶಗಳು ನೆರೆನೀರಿನಿಂದ ಮುಳುಗಿವೆ.

ಪ್ರವಾಹದಿಂದಾಗಿ ಕನಿಷ್ಠ 13 ಸಾವಿರ ಮಂದಿ ಸಂತ್ರಸ್ತರಾಗಿದ್ದು, ಅವರಿಗಾಗಿ ತಾತ್ಕಾಲಿಕ ಶಿಬಿರಗಳನ್ನು ಸ್ಥಾಪಿಸಲಾಗಿದೆ. ನೆರೆಯಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಿಗೆ ಶೋಧ ಹಾಗೂ ಪರಿಹಾರ ಕಾರ್ಯಾಚರಣೆ ತಂಡಗಳನ್ನು ರವಾನಿಸಲಾಗಿದೆ. ಆದಾಗ್ಯೂ ಕೆಲವೆಡೆ ಪ್ರವಾಹ ಹಾಗೂ ಭೂಕುಸಿತದಿಂದಾಗಿ ರಸ್ತೆ ಸಂಪರ್ಕ ಸಂಪೂರ್ಣ ಕಡಿದುಹೋಗಿರುವುದರಿಂದ ನೆರವಿನ ಸಾಮಾಗ್ರಿಗಳ ವಿತರಣೆಗೆ ಅಡ್ಡಿಯುಂಟಾಗಿದೆ ಎಂದು ಇಂಡೊನೇಶ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಸುತೊಪೊ ಪೂರ್ವೊ ನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News