ಶ್ರೀಲಂಕಾ: ಭಯೋತ್ಪಾದಕರ ಅಡಗುದಾಣದ ಬಗ್ಗೆ ಮೊದಲ ಎಚ್ಚರಿಕೆ ನೀಡಿದ್ದೇ ಸ್ಥಳೀಯ ಮುಸ್ಲಿಮರು

Update: 2019-04-29 18:29 GMT

ಕೊಲಂಬೋ,ಎ.29: ಶ್ರೀಲಂಕಾದ ಅಂಪಾರಾ ಜಿಲ್ಲೆಯ ಕಲ್ಮುನೈ ಪಟ್ಟಣದಲ್ಲಿಯ ಭಯೋತ್ಪಾದಕರ ಸುರಕ್ಷಿತ ಅಡಗುದಾಣದ ಬಗ್ಗೆ ಮೊದಲ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ್ದೇ ಸ್ಥಳೀಯ ಯುವಕರ ಗುಂಪು. ಇದರಿಂದಾಗಿಯೇ ಶುಕ್ರವಾರ ರಾತ್ರಿ ಭದ್ರತಾ ಪಡೆಗಳು ಅಲ್ಲಿಗೆ ದಾಳಿ ನಡೆಸಿ ಆ ಮನೆಯಲ್ಲಿದ್ದ 15 ಮಂದಿಯನ್ನು ಕೊಲ್ಲಲು ಸಾಧ್ಯವಾಗಿತ್ತು ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದರು.

ಸ್ಥಳೀಯರು ಹೇಳುವಂತೆ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿರುವ ಸೈಂತಮರುತು ಬಡಾವಣೆಯಲ್ಲಿನ ಕಬ್ಬಿಣದ ಸೇತುವೆ ಬಳಿಯ ಬೀದಿಯಲ್ಲಿ ಸಾಗುತ್ತಿದ್ದ ಯುವಕನೋರ್ವ ಮನೆಯೊಂದರೊಳಗೆ ವ್ಯಕ್ತಿಯೋರ್ವ ರೈಫಲ್ ಹಿಡಿದುಕೊಂಡು ನಿಂತಿದ್ದನ್ನು ಕಂಡಿದ್ದ. ಆತ ಈ ಬಗ್ಗೆ ಇತರರನ್ನು ಜಾಗ್ರತಗೊಳಿಸಿದಾಗ ಸ್ಥಳೀಯ ನಿವಾಸಿಗಳ ಗುಂಪು ಆ ಮನೆಯತ್ತ ಧಾವಿಸಿತ್ತು. ಮನೆಯಲ್ಲಿನ ನಿವಾಸಿಗಳು 10 ದಿನಗಳ ಹಿಂದಷ್ಟೇ ಅಲ್ಲಿಗೆ ಬಾಡಿಗೆಗೆ ಬಂದಿದ್ದು,ಸ್ಥಳೀಯರಿಂದ ದೂರವೇ ಇದ್ದರು. ಸ್ಥಳೀಯರು ಅವರ ಗುರುತಿನ ಚೀಟಿಗಳನ್ನು ಕೇಳಿದಾಗ ಅವರು ನುಣುಚಿಕೊಳ್ಳಲು ಯತ್ನಿಸಿದ್ದರು. ಅವರ ಪೈಕಿ ಓರ್ವ ಕೋಪಗೊಂಡು,ತಾವು ಮುಸ್ಲಿಮರು ಮತ್ತು ತಮ್ಮನ್ನು ಶಂಕಿಸುವುದು ನ್ಯಾಯವಲ್ಲ ಎಂದು ಕೂಗಾಡಿದ್ದ. ನಾವೂ ಮುಸ್ಲಿಮರೇ ಎಂದು ಹೇಳಿದ್ದ ಗುಂಪು ತನ್ನ ಪಟ್ಟು ಬಿಡದಿದ್ದಾಗ ಮನೆಯ ನಿವಾಸಿಗಳಲ್ಲೋರ್ವ ಅವರತ್ತ ಕರೆನ್ಸಿ ನೋಟುಗಳನ್ನು ಎಸೆಯತೊಡಗಿದ್ದ. ಆದರೆ ಮನೆಯನ್ನು ತಾವು ಶೋಧಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದಾಗ ಅವರಲ್ಲೋರ್ವ ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದ್ದ.

ಗುಂಪಿಲ್ಲ್ಲಿಯ ಕೆಲವರು ಸ್ಥಳೀಯ ಮಸೀದಿ ಸಮಿತಿಗೆ ವಿಷಯ ತಿಳಿಸಿದಾಗ ಸದಸ್ಯರು ಅಲ್ಲಿಗೆ ಬಂದು ಸ್ಥಳೀಯರೊಂದಿಗೆ ಧ್ವನಿಗೂಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸ್ ಮತ್ತು ಸೇನೆ ಅಲ್ಲಿಗೆ ಆಗಮಿಸಿತ್ತು ಹಾಗೂ ಒಂದೂವರೆ ಗಂಟೆಯಲ್ಲಿ ಎಲ್ಲವೂ ಮುಗಿದುಹೋಗಿತ್ತು. ಈಸ್ಟರ್ ರವಿವಾರದ ಸರಣಿ ಸ್ಫೋಟಗಳ ಶಂಕಿತ ರೂವಾರಿ ಝಹರಾನ್ ಹಾಷಿಂನ ತಂದೆ ಮತ್ತು ಇಬ್ಬರು ಸೋದರರು ಸೇರಿದಂತೆ ಕನಿಷ್ಠ 15 ಜನರು ಈ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದರು. ಅವರಲ್ಲಿ ಮಕ್ಕಳೂ ಇದ್ದರು. ಸುಟ್ಟ ಗಾಯಗಳಾಗಿದ್ದ ಹಾಷಿಂನ ಪತ್ನಿ ಮತ್ತು ನಾಲ್ಕು ವರ್ಷ ಪ್ರಾಯದ ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೇನೆಯ ಗುಪ್ತಚರ ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News