ಅಂಗರಕ್ಷಕಿಯನ್ನು ಮದುವೆಯಾದ ಥಾಯ್ಲೆಂಡ್ ದೊರೆ

Update: 2019-05-02 15:47 GMT

ಥಾಯ್ಲೆಂಡ್ ಬ್ಯಾಂಕಾಕ್ (ಥಾಯ್ಲೆಂಡ್), ಮೇ 2: ಅಧಿಕೃತ ಪಟ್ಟಾಭಿಷೇಕದ ಕೆಲವೇ ದಿನಗಳ ಮೊದಲು, ಥಾಯ್ಲೆಂಡ್ ದೊರೆ ಮಹಾ ವಜಿರಲೊಂಗ್‌ಕೋರ್ನ್ ಬುಧವಾರ ತನ್ನ ಖಾಸಗಿ ಅಂಗರಕ್ಷಕ ದಳದ ಉಪ ಮುಖ್ಯಸ್ಥೆಯನ್ನು ಮದುವೆಯಾಗಿದ್ದಾರೆ ಹಾಗೂ ಅವರಿಗೆ ‘ರಾಣಿ ಸುತಿದಾ’ ಎಂಬ ಹೆಸರನ್ನು ನೀಡಿದ್ದಾರೆ.

ಈ ಅಚ್ಚರಿಯ ಘೋಷಣೆಯನ್ನು ರಾಯಲ್ ಗಝೆಟ್‌ನಲ್ಲಿ ಪ್ರಕಟಿಸಲಾಗಿದೆ ಹಾಗೂ ವಿವಾಹ ಸಮಾರಂಭದ ವೀಡಿಯೊ ತುಣುಕುಗಳನ್ನು ಬಳಿಕ ಥಾಯ್ಲೆಂಡ್‌ನ ಎಲ್ಲ ಟೆಲಿವಿಶನ್ ಚಾನೆಲ್‌ಗಳಲ್ಲಿ ರಾತ್ರಿಯ ‘ರಾಜ ಸುದ್ದಿ’ ವಿಭಾಗದಲ್ಲಿ ಪ್ರಸಾರ ಮಾಡಲಾಗಿದೆ.

66 ವರ್ಷದ ವಜಿರಲೊಂಗ್‌ಕೋರ್ನ್‌ರ ತಂದೆ ದೊರೆ ಭೂಮಿಬೋಲ್ ಅಡುಲ್ಯಡೇಜ್ 2016 ಅಕ್ಟೋಬರ್‌ನಲ್ಲಿ ನಿಧನರಾದ ಬಳಿಕ, ಅವರು ದೇಶದ ಸಾಂವಿಧಾನಿಕ ದೊರೆಯಾಗಿದ್ದಾರೆ. ಅವರ ತಂದೆ 70 ವರ್ಷಗಳ ಕಾಲ ಸಿಂಹಾಸನದಲ್ಲಿದ್ದರು.

ಶನಿವಾರ ಬೌದ್ಧ ಮತ್ತು ಬ್ರಾಹ್ಮಣ ಸಂಪ್ರದಾಯಗಳಿಗೆ ಅನುಗುಣವಾಗಿ ಅವರ ಪಟ್ಟಾಭಿಷೇಕ ನಡೆಯಲಿದೆ.

ಥಾಯ್ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದ ಸುತಿದಾ ಟಿಡ್‌ಜೈ ಅವರನ್ನು 2014ರಲ್ಲಿ ವಜಿರಲೊಂಗ್‌ಕೋರ್ನ್ ತನ್ನ ಅಂಗರಕ್ಷಕ ದಳದ ಉಪ ಕಮಾಂಡರ್ ಆಗಿ ನೇಮಿಸಿದ್ದರು.

ದೊರೆ ಮತ್ತು ಸುತಿದಾ ಮಧುರ ಸಂಬಂಧ ಹೊಂದಿದ್ದಾರೆ ಎಂಬುದಾಗಿ ಕೆಲವು ರಾಜಕೀಯ ವೀಕ್ಷಕರು ಮತ್ತು ವಿದೇಶಿ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಅವರ ನಡುವೆ ಸಂಬಂಧ ಇರುವುದನ್ನು ಅರಮನೆಯು ಒಪ್ಪಿಕೊಂಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News