ಇಸ್ಲಾಂ ವಿರೋಧಿ ಹೇಳಿಕೆ: ಆಸ್ಟ್ರೇಲಿಯಾದ ಆಡಳಿತ ಲಿಬರಲ್ ಪಾರ್ಟಿ ಅಭ್ಯರ್ಥಿ ಪಕ್ಷದಿಂದ ಉಚ್ಛಾಟನೆ

Update: 2019-05-04 08:58 GMT

ಸಿಡ್ನಿ, ಮೇ 4: ಆಸ್ಟ್ರೇಲಿಯಾದ ಆಡಳಿತ ಲಿಬರಲ್ ಪಾರ್ಟಿ ಪರ ಅಭ್ಯರ್ಥಿ ಜೆರೆಮಿ ಹರ್ನ್ ಎಂಬವರನ್ನು ಬುಧವಾರ ಅವರ ಇಸ್ಲಾಂ ವಿರೋಧಿ ಹೇಳಿಕೆಗಳಿಗಾಗಿ ಪಕ್ಷದಿಂದ ಉಚ್ಛಾಟಿಸಲಾಗಿದೆ.

ಮುಸ್ಲಿಮೇತರ ಆಸ್ಟ್ರೇಲಿಯನ್ ನಾಗರಿಕರ ಹತ್ಯೆ ಯಾ ಗುಲಾಮಗಿರಿಗೆ ಆಗ್ರಹಿಸುವಂತಹ ಸಿದ್ಧಾಂತವನ್ನು ಆಸ್ಟ್ರೇಲಿಯಾದ ಮುಸ್ಲಿಮರು ಹೊಂದಿದ್ದಾರೆ’’ ಎಂದು ಕಳೆದ ವಾರ ಜೆರೆಮಿ ಆನ್‌ಲೈನ್ ಪತ್ರಿಕೆಯೊಂದರ ಪ್ರತಿಕ್ರಿಯೆ ವಿಭಾಗದಲ್ಲಿ ಬರೆದಿದ್ದರು.

‘‘ಆಸ್ಟ್ರೇಲಿಯಾದ ಮುಸ್ಲಿಮರು ಸರಕಾರವನ್ನು ಬೀಳಿಸಿ ಶರೀಅ ಕಾನೂನನ್ನು ಜಾರಿಗೊಳಿಸುವ ಇಚ್ಛೆ ಹೊಂದಿರುವುದರಿಂದ ಅವರಿಗೆ ಪೌರತ್ವ ನಿರಾಕರಿಸಬೇಕೆಂದು’’ ಕೂಡ ಅವರು ಬರೆದಿರುವುದನ್ನು ಹೆರಾಲ್ಡ್ ಸನ್ ಪತ್ರಿಕೆ ಬಯಲಿಗೆಳೆದಿತ್ತು. ಆದರೆ ನಂತರ ಅವರು ತಮ್ಮ ಈ ಪ್ರತಿಕ್ರಿಯೆಗೆ ಕ್ಷಮೆ ಕೋರಿದ್ದರು.

ಲಿಬರಲ್ ಪಾರ್ಟಿ ಇಂತಹ ಧೋರಣೆಯನ್ನು ಯಾವತ್ತೂ ಹೊಂದಿಲ್ಲ ಅದನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ ಎಂದು ಹೇಳಿದ ವಿಕ್ಟೋರಿಯನ್ ಲಿಬರಲ್ ನಾಯಕ ಮೈಕೆಲ್ ಓ’ಬ್ರಿಯನ್, ತಮಗೆ ಜೆರೆಮಿ ಹೇಳಿಕೆ ಆಘಾತ ಉಂಟು ಮಾಡಿದೆ ಎಂದಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಸಲಿಂಗಿಗಳು ಆಯ್ಕೆಯಾಗುವುದನ್ನು ತಡೆಯಲು ಕ್ರೈಸ್ತರನ್ನು ಪಕ್ಷ ಸೇರಲು ಉತ್ತೇಜಿಸಬೇಕೆಂದು ಇನ್ನೊಬ್ಬ ಲಿಬರಲ್ ಅಭ್ಯರ್ಥಿ ಪೀಟರ್ ಕಿಲ್ಲಿನ್ ಹೇಳಿಕೆ ನೀಡಿದ್ದು ಅವರು ಕೂಡ ಅನರ್ಹಗೊಂಡಿದ್ದಾರೆ.

ಇದು ಪ್ರಧಾನಿ ಸ್ಕಾಟ್ ಮಾರ್ರಿಸನ್ ಅವರ ಸರಕಾರಕ್ಕೆ ದೊಡ್ಡ ಮುಜುಗರಕಾರಿ ಸಂಗತಿಯಾಗಿ ಪರಿಣಮಿಸಿದ್ದು, ಆಡಳಿತ ಪಕ್ಷವು ಬಲ ಪಂಥೀಯ ತೀವ್ರಗಾಮಿಗಳಿಂದ ತುಂಬಿದೆ ಎಂದು ವಿಪಕ್ಷ ನಾಯಕ ಬಿಲ್ ಶಾರ್ಟೆನ್ ಆರೋಪಿಸಿದ್ದಾರೆ.

ಆಸ್ಟ್ರೇಲಿಯಾದ ಸಾರ್ವತ್ರಿಕ ಚುನಾವಣೆ ಮೇ 18ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News