‘ರಾಯ್ಟರ್ಸ್’ ಪತ್ರಕರ್ತರು 500 ದಿನಗಳನ್ನು ಜೈಲಿನಲ್ಲಿ ಕಳೆದದ್ದೇಕೆ?

Update: 2019-05-08 16:47 GMT

ಲಂಡನ್, ಮೇ 8: ಮ್ಯಾನ್ಮಾರ್ ರಾಜಧಾನಿ ಯಾಂಗನ್‌ನ ಹೊರವಲಯದಲ್ಲಿರುವ ಜೈಲಿನಿಂದ ಇಬ್ಬರು ‘ರಾಯ್ಟರ್ಸ್’ ಪತ್ರಕರ್ತರನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು. ಸಾಂಪ್ರದಾಯಿಕ ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಅಧ್ಯಕ್ಷ ವಿನ್ ಮ್ಯಿಂಟ್ ಘೋಷಿಸಿದ ಸಾಮೂಹಿಕ ಕ್ಷಮಾದಾನದ ಫಲಾನುಭವಿಗಳ ಪಟ್ಟಿಯಲ್ಲಿ ಪತ್ರಕರ್ತರಾದ 33 ವರ್ಷದ ವಾ ಲೋನ್ ಮತ್ತು 29 ವರ್ಷದ ಕ್ಯಾವ್ ಸೋ ಊ ಅವರ ಹೆಸರುಗಳೂ ಇದ್ದವು.

ಪತ್ರಕರ್ತರನ್ನು ಯಾಕೆ ಬಂಧಿಸಲಾಯಿತು?

2017 ಡಿಸೆಂಬರ್ 12ರಂದು ವಾ ಲೋನ್ ಮತ್ತು ಕ್ಯಾವ್ ಸೋ ಊ ಅವರನ್ನು ಪೊಲೀಸ್ ಅಧಿಕಾರಿಯೊಬ್ಬರು ಯಾಂಗನ್‌ನಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ಕರೆದರು. ಭೇಟಿಯ ಬಳಿಕ, ಪತ್ರಕರ್ತರು ಹೊರಟು ನಿಂತಾಗ, ಪೊಲೀಸ್ ಅಧಿಕಾರಿಯು ಎರಡು ಮಡಿಚಿದ ಕಾಗದದ ತುಂಡುಗಳನ್ನು ಅವರ ಕೈಗಳಿಗೆ ತುರುಕಿದರು. ಅವರು ರೆಸ್ಟೋರೆಂಟ್‌ನ ಹೊರಗೆ ಬಂದ ತಕ್ಷಣ ಅವರನ್ನು ಬಂಧಿಸಲಾಯಿತು ಹಾಗೂ ಅವರ ಕೈಗಳಲ್ಲಿದ್ದ ಕಾಗದದ ತುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಅವರು ಆ ಕಾಗದದ ತುಂಡುಗಳಲ್ಲಿ ಏನಿದೆ ಎಂಬುದನ್ನೂ ನೋಡಿರಲಿಲ್ಲ.

ಮರುದಿನ, ಈ ಪತ್ರಕರ್ತರು ಸರಕಾರಿ ರಹಸ್ಯಗಳ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬುದಾಗಿ ಮ್ಯಾನ್ಮಾರ್ ಸರಕಾರ ಹೇಳಿತು. ಈ ಕಾಯ್ದೆಯನ್ನು ಸ್ವಾತಂತ್ರ್ಯಪೂರ್ವ ಭಾರತಕ್ಕಾಗಿ 1923ರಲ್ಲಿ ಬ್ರಿಟಿಶರು ಜಾರಿಗೊಳಿಸಿದ್ದರು. ಮುಂದಿನ ವಾರಗಳು ಮತ್ತು ತಿಂಗಳುಗಳ ಅವಧಿಯಲ್ಲಿ, ಬಂಧಿತ ಪತ್ರಕರ್ತರನ್ನು ಬಿಡುಗಡೆಗೊಳಿಸುವಂತೆ ವಿಶ್ವಸಂಸ್ಥೆ, ಅಮೆರಿಕ, ಬ್ರಿಟನ್, ಮ್ಯಾನ್ಮಾರ್ ಪತ್ರಕರ್ತರು ಹಾಗೂ ಹಲವಾರು ಸ್ವತಂತ್ರ ಅಂತರ್‌ರಾಷ್ಟ್ರೀಯ ವೀಕ್ಷಕರು ಮಾಡಿದ ಮನವಿಗಳನ್ನು ಮ್ಯಾನ್ಮಾರ್ ಆಡಳಿತ ಉಪೇಕ್ಷಿಸಿತು.

ನ್ಯಾಯಾಲಯದ ವಿಚಾರಣೆಯ ವೇಳೆ, ‘ರಹಸ್ಯ ದಾಖಲೆ’ಗಳನ್ನು ಪತ್ರಕರ್ತರಿಗೆ ಕೊಡಬೇಕು ಹಾಗೂ ಅವುಗಳನ್ನು ಹೊಂದಿದ ಆರೋಪವನ್ನು ಅವರ ವಿರುದ್ಧ ಹೊರಿಸಬೇಕು ಎಂಬುದಾಗಿ ಪೊಲೀಸ್ ಮುಖ್ಯಸ್ಥರು ನನಗೆ ಆದೇಶ ನೀಡಿದ್ದಾರೆ ಎಂಬುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

2018 ಜುಲೈಯಲ್ಲಿ, ನ್ಯಾಯಾಲಯವು ವರದಿಗಾರರ ವಿರುದ್ಧ ಸರಕಾರಿ ರಹಸ್ಯಗಳ ಕಾಯ್ದೆಯಡಿ ಆರೋಪಗಳನ್ನು ಹೊರಿಸಿತು. 2018 ಸೆಪ್ಟಂಬರ್ 3ರಂದು, ಪತ್ರಕರ್ತರು ‘‘ಸಾಮಾನ್ಯ ಪತ್ರಿಕೋದ್ಯಮದ ಕೆಲಸಗಳನ್ನು ಮಾಡುತ್ತಿರಲಿಲ್ಲ’’ ಹಾಗೂ ಅವರ ಬಳಿಯಿದ್ದ ‘ಅತಿ ರಹಸ್ಯ ಸರಕಾರಿ ದಾಖಲೆಗಳು ದೇಶದ ಶತ್ರುಗಳಿಗೆ ಉಪಯುಕ್ತವಾಗಬಹುದು’’ ಎಂಬುದಾಗಿ ನ್ಯಾಯಾಧೀಶ ಯೆ ಲ್ವಿನ್ ಹೇಳಿದರು ಹಾಗೂ ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು.

ಅವರನ್ನು ಮಂಗಳವಾರ ಕೊನೆಗೂ ಜೈಲಿನಿಂದ ಬಿಡುಗಡೆ ಮಾಡಿದಾಗ ಅವರು 500ಕ್ಕೂ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

ಪತ್ರಕರ್ತರು ಹೇಳುವುದೇನು?

2017 ಸೆಪ್ಟಂಬರ್ 2ರಂದು ರಖೈನ್ ರಾಜ್ಯದ ಇನ್ ಡಿನ್ ಎಂಬ ಕರಾವಳಿ ಗ್ರಾಮದಲ್ಲಿ ಮ್ಯಾನ್ಮಾರ್ ಸೇನೆ ಮತ್ತು ಬೌದ್ಧ ಗ್ರಾಮಸ್ಥರಿಂದ 10 ಮಂದಿ ರೊಹಿಂಗ್ಯಾ ಮುಸ್ಲಿಮ್ ಪುರುಷರು ಹತ್ಯೆಗೀಡಾದ ಘಟನೆ ಬಗ್ಗೆ ವಾ ಲೋನ್ ಮತ್ತು ಕ್ಯಾವ್ ಸೋ ಊ ವರದಿ ತಯಾರಿಸುತ್ತಿದ್ದರು.

ಈ ಬಗ್ಗೆ 2018 ಫೆಬ್ರವರಿ 8ರಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯು ‘ಮ್ಯಾನ್ಮಾರ್‌ನಲ್ಲಿ ಹತ್ಯಾಕಾಂಡ’ ಎಂಬ ತಲೆಬರಹದಲ್ಲಿ ಆಗ ಜೈಲಿನಲ್ಲಿದ್ದ ಈ ಇಬ್ಬರು ಪತ್ರಕರ್ತರ ಹೆಸರುಗಳೊಂದಿಗೆ ವರದಿಯೊಂದನ್ನು ಪ್ರಕಟಿಸಿತು. ಹತ್ಯೆಗೀಡಾದ 10 ರೊಹಿಂಗ್ಯಾ ಮುಸ್ಲಿಮರ ಪೈಕಿ ಇಬ್ಬರನ್ನು ಬೌದ್ಧ ಗ್ರಾಮಸ್ಥರು ಕಡಿದು ಕೊಂದರು ಹಾಗೂ ಉಳಿದವರನ್ನು ಸೈನಿಕರು ಗುಂಡು ಹಾರಿಸಿ ಕೊಂದರು ಎಂಬುದಾಗಿ ಆ ವರದಿಯಲ್ಲಿ ಹೇಳಲಾಗಿದೆ.

ವರದಿಯೊಂದಿಗೆ 10 ರೊಹಿಂಗ್ಯಾ ಮುಸ್ಲಿಮ್ ಪುರುಷರು ಹತ್ಯೆಗೀಡಾಗುವ ಮೊದಲು ಗದ್ದೆಯೊಂದರಲ್ಲಿ ಮಂಡಿಯೂರಿ ಸಾಲಾಗಿ ಕುಳಿತಿದ್ದ ಚಿತ್ರವೊಂದನ್ನೂ ಪ್ರಕಟಿಸಲಾಗಿತ್ತು. ಈ ಪೈಕಿ ಇಬ್ಬರು 17 ಮತ್ತು 18 ವರ್ಷ ಪ್ರಾಯದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು.

‘ರಾಯ್ಟರ್ಸ್’ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ, ರೊಹಿಂಗ್ಯಾ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿರುವುದು, ಅವರನ್ನು ಕೊಂದಿರುವುದು ಮತ್ತು ಅವರ ದೇಹಗಳನ್ನು ಹೂತುಹಾಕಿರುವುದನ್ನು ಬೌದ್ಧ ಗ್ರಾಮಸ್ಥರು ಒಪ್ಪಿಕೊಂಡಿದ್ದರು. ರೊಹಿಂಗ್ಯಾ ಮುಸ್ಲಿಮರನ್ನು ಕೊಂದಿರುವ ಬಗ್ಗೆ ಅರೆಸೇನಾ ಸಿಬ್ಬಂದಿ ನೀಡಿರುವ ವಿವರಣೆಗಳನ್ನೂ ಪ್ರಕಟಿಸಲಾಗಿತ್ತು.

2019 ಎಪ್ರಿಲ್‌ನಲ್ಲಿ ವಾ ಲೋನ್ ಮತ್ತು ಕ್ಯಾ ಸೋ ಊ ಅವರಿಗೆ ಅಂತರ್‌ರಾಷ್ಟ್ರೀಯ ವರದಿಗಾರಿಕೆಗಾಗಿ ನೀಡಲಾಗುವ ‘ಪುಲಿಟ್ಸರ್’ ಪ್ರಶಸ್ತಿಗಳನ್ನು ನೀಡಲಾಗಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7.50 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News