‘ಟೈಮ್ ಮ್ಯಾಗಝಿನ್’ ಮುಖಪುಟದಲ್ಲಿ ಮೋದಿಗೆ ಮಂಗಳಾರತಿ

Update: 2019-05-10 08:49 GMT

ಹೊಸದಿಲ್ಲಿ, ಮೇ 10:  ಅಮೆರಿಕದ ಖ್ಯಾತ ‘ಟೈಮ್ ಮ್ಯಾಗಝಿನ್’ನ ಇತ್ತೀಚಿನ ಆವೃತ್ತಿಯಲ್ಲಿ (ಮೇ 20, 2019) ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮುಖಪುಟ ಲೇಖನ ಪ್ರಕಟಿಸಲಾಗಿದೆ. ‘ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂಬ ಶೀರ್ಷಿಕೆಯ ಮುಖಪುಟ ಲೇಖನದ ಜತೆ ಮೋದಿಯ ಚಿತ್ರವೊಂದನ್ನೂ ಪ್ರಕಟಿಸಲಾಗಿದೆ.

Can the World’s Largest Democracy Endure Another Five Years of a Modi Government?  ( ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಇನ್ನೊಂದು ಐದು ವರ್ಷ ಮೋದಿ ಆಡಳಿತವನ್ನು ತಾಳಿಕೊಳ್ಳಬಲ್ಲುದೇ?) ಎಂದು ಪತ್ರಕರ್ತ ಆತಿಶ್ ತಸೀರ್ ತಮ್ಮ ಈ ಲೇಖನದಲ್ಲಿ ಭಾರತ, ಅಮೆರಿಕಾ, ಬ್ರೆಜಿಲ್, ಬ್ರಿಟನ್ ಮತ್ತು ಟರ್ಕಿಯಂತಹ ಪ್ರಜಾಪ್ರಭುತ್ವಗಳಲ್ಲಿ ಹೆಚ್ಚುತ್ತಿರುವ ಪಾಪ್ಯುಲಿಸಂ ಬಗ್ಗೆ  ಬರೆದಿದ್ದಾರೆ.

“ಪಾಪ್ಯುಲಿಸಂಗೆ ಬಲಿ ಬಿದ್ದ ದೊಡ್ಡ ಪ್ರಜಾಪ್ರಭುತ್ವಗಳಲ್ಲಿ ಭಾರತ ಮೊದಲನೆಯ ದೇಶ''ಎಂದು ಲೇಖನ ಆರಂಭಗೊಳ್ಳುತ್ತದೆ. “ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ದೇಶದ ಮೂಲಭೂತ ತತ್ವಗಳು, ಅದರ ಸ್ಥಾಪಕರ ಆಶಯಗಳು, ಅಲ್ಪಸಂಖ್ಯಾತರ ಸ್ಥಾನಮಾನಗಳು, ವಿಶ್ವವಿದ್ಯಾಲಗಳಿಂದ ಹಿಡಿದು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಮಾಧ್ಯಮಗಳ ತನಕ ಎಲ್ಲಾ ಸಂಸ್ಥೆಗಳ ಬಗ್ಗೆಯೂ ಅಪನಂಬಿಕೆ ಹುಟ್ಟಿಸಲಾಗಿದೆ. ಮೋದಿಯ ಆಡಳಿತದಲ್ಲಿ ಮುಸ್ಲಿಮರಿಂದ ಹಿಡಿದು ಕ್ರೈಸ್ತರ ತನಕ ಎಲ್ಲಾ ಅಲ್ಪಸಂಖ್ಯಾತರೂ  ದಾಳಿಗೊಳಗಾಗಿದ್ದಾರೆ'' ಎಂದು ಬರೆಯಲಾಗಿದೆ.

ಅರ್ಥವ್ಯವಸ್ಥೆ ಕುರಿತಂತೆ 2014ರ ಚುನಾವಣೆ ಸಂದರ್ಭ ಮೋದಿ ನೀಡಿದ ಆಶ್ವಾಸನೆಗಳ ಕುರಿತಂತೆ ಲೇಖಕರು, “ಮೋದಿಯ ಆರ್ಥಿಕ ಪವಾಡಗಳು ನಿಜವಾಗಲು ವಿಫಲವಾಗಿವೆ. ಜತೆಗೆ ವಿಷಕಾರಿ ಧಾರ್ಮಿಕ ರಾಷ್ಟ್ರವಾದದ ವಾತಾವರಣ ಸೃಷ್ಟಿಸಲು ಅವರು ಸಹಾಯ ಮಾಡಿದ್ದಾರೆ'' ಎಂದು ವಿವರಿಸಿದ್ದಾರೆ. “ದೇಶದಲ್ಲಿರುವ ದುರ್ಬಲ ವಿಪಕ್ಷಗಳು ಮೋದಿ ಪಾಲಿಗೆ  ವರದಾನವಾಗಿದೆ. ತನ್ನ ಭರವಸೆಗಳನ್ನು ಓಡೇರಿಸಲು ವಿಫಲವಾದ ರಾಜಕಾರಣಿ ಈಗ ಮರು ಆಯ್ಕೆ ಬಯಸಿದ್ದಾರೆ. ಚುನಾವಣೆ ಬಗ್ಗೆ ಏನು  ಹೇಳಿದರೂ ಭರವಸೆ ಎನ್ನುವುದು ಅಲ್ಲಿಲ್ಲ'' ಎಂದು ಬರೆಯಲಾಗಿದೆ.

2015ರಲ್ಲಿ ಮೋದಿ ‘ಟೈಮ್’ ಮುಖಪುಟದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕಿಂತ ಹಿಂದಿನ ವರ್ಷವಷ್ಟೇ ಪ್ರಧಾನಿಯಾಗಿದ್ದ ಅವರ ಸಂದರ್ಶನ ಆ  ಆವೃತ್ತಿಯಲ್ಲಿ ಪ್ರಕಟಿಸಲಾಗಿತ್ತು. 2012ರಲ್ಲಿ ಗುಜರಾತ್ ಸೀಎಂ ಆಗಿದ್ದಾಗಲೂ ಅವರು ‘ಟೈಮ್’ ಮುಖಪಟದಲ್ಲಿ ಕಾಣಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News