ನೆಹರೂ-ಗಾಂಧಿ ಕುಟುಂಬದಿಂದಾಗಿ ಕಾಂಗ್ರೆಸ್ ಅತೀಹೆಚ್ಚು ಮತ: ಸಲ್ಮಾನ್ ಖುರ್ಷಿದ್

Update: 2019-05-28 17:00 GMT

ಹೊಸದಿಲ್ಲಿ, ಮೇ.28: ನೆಹರೂ-ಗಾಂಧಿ ಕುಟುಂಬವೇ ಕಾಂಗ್ರೆಸ್‌ಗೆ ಹೆಚ್ಚು ಮತಗಳನ್ನು ಬರುವಂತೆ ಮಾಡುವ ಸಾಧನವಾಗಿದ್ದು ಸದ್ಯದ ಕಠಿಣ ಪರಿಸ್ಥಿತಿಯಲ್ಲಿ ಪಕ್ಷದ ನಾಯಕತ್ವ ಬದಲಾವಣೆ ಕ್ಷುಲ್ಲಕ ಮತ್ತು ಕೃತಜ್ಞತೆಹೀನ ನಿರ್ಧಾರ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿಪ್ರಾಯಿಸಿದ್ದಾರೆ.

ಲೋಕಸಭಾ ಚುನಾವಣೆಯ ಆಘಾತದಿಂದ ಮೇಲೆ ಬರಲು ಪಕ್ಷಕ್ಕೆ ದೀರ್ಘ ಸಮಯ, ಬಹುಶಃ ಹತ್ತು ವರ್ಷಗಳೇ ಬೇಕಾಗಬಹುದು ಎಂದು ಮಾಜಿ ವಿದೇಶಾಂಗ ಸಚಿವರೂ ಆಗಿರುವ ಖುರ್ಷಿದ್ ತಿಳಿಸಿದ್ದಾರೆ.

ನೆಹರೂ-ಗಾಂಧಿ ಕುಟುಂಬವೇ ಕಾಂಗ್ರೆಸ್ ಪಕ್ಷವನ್ನು, ಅದರ ಉತ್ತುಂಗದ ಮತ್ತು ಕಷ್ಟಕರ ಸಮಯಗಳಲ್ಲಿ ಒಗ್ಗಟ್ಟಾಗಿಡುವ ಶಕ್ತಿಯಾಗಿದೆ ಎಂದು ಸಲ್ಮಾನ್ ಖುರ್ಷಿದ್ ತಿಳಿಸಿದ್ದಾರೆ.

ಇಂದು ಈ ಕುಟುಂಬ ನಮಗೆ ಹೆಚ್ಚಿನ ಮತಗಳನ್ನು ತಾರದೆ ಇರಬಹುದು. ಆದರೆ ನೆಹರೂ-ಗಾಂಧಿ ಕುಟುಂಬವೇ ಕಾಂಗ್ರೆಸ್‌ಗೆ ಹೆಚ್ಚು ಮತಗಳನ್ನು ತರುವ ಶಕ್ತಿಯಾಗಿದೆ ಎಂದು ಹಿರಿಯ ನಾಯಕ ಅಭಿಪ್ರಾಯಿಸಿದ್ದಾರೆ.

ಚುನಾವಣಾ ಸೋಲಿನ ಬಳಿಕ ಅಧ್ಯಕ್ಷ ಸ್ಥಾನವನ್ನು ತೊರೆಯುವುದಾಗಿ ಪಟ್ಟು ಹಿಡಿದಿರುವ ಮತ್ತು ಗಾಂಧಿ ಕುಟುಂಬದ ಯಾವ ಸದಸ್ಯನೂ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ಏರಬಾರದು ಎಂದು ಬಯಸಿರುವ ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News