ಭಾರತವನ್ನು ಆದ್ಯತಾ ವ್ಯಾಪಾರ ಒಪ್ಪಂದದಿಂದ ತೆಗೆಯುವ ನಿರ್ಧಾರ ಖಾಯಂ: ಅಮೆರಿಕ ಅಧಿಕಾರಿ

Update: 2019-05-31 17:16 GMT

ವಾಶಿಂಗ್ಟನ್, ಮೇ 31: ಭಾರತದ ಪ್ರಧಾನಿಯಾಗಿ ಪುನರಾಯ್ಕೆಗೊಂಡ ನರೇಂದ್ರ ಮೋದಿ ಸರಕಾರದೊಂದಿಗೆ ನಿಕಟ ಬಾಂಧವ್ಯವನ್ನು ಹೊಂದುವ ಅಮೆರಿಕದ ಇಚ್ಛೆಯ ಹೊರತಾಗಿಯೂ, ಆದ್ಯತಾ ವ್ಯಾಪಾರ ಒಪ್ಪಂದವೊಂದರಿಂದ ಭಾರತವನ್ನು ಹೊರಹಾಕುವ ಅಮೆರಿಕದ ನಿರ್ಧಾರವು ಖಾಯಂ ಆಗಿರುತ್ತದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವ್ಯಾಪಾರದಲ್ಲಿ ದೇಶಗಳಿಗೆ ಆದ್ಯತೆ ನೀಡುವ ‘ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸಸ್’ನಿಂದ ಭಾರತವನ್ನು ಹೊರಹಾಕುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮಾರ್ಚ್‌ನಲ್ಲಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಈ ಒಪ್ಪಂದವು ಅಭಿವೃದ್ಧಿಶೀಲ ದೇಶಗಳ ಸರಕುಗಳು ಇತರ ದೇಶಗಳಿಗೆ ಸುಲಭವಾಗಿ ಸಿಗುವಂತೆ ನೋಡಿಕೊಳ್ಳುತ್ತದೆ.

ಭಾರತವು ಈ ಒಪ್ಪಂದದ ಪ್ರಮುಖ ಫಲಾನುಭವಿಯಾಗಿತ್ತು ಹಾಗೂ ಈ ಒಪ್ಪಂದದ ಮೂಲಕ 2017ರಲ್ಲಿ ಅಮೆರಿಕಕ್ಕೆ 5.6 ಬಿಲಿಯ ಡಾಲರ್ (ಸುಮಾರು 39,100 ಕೋಟಿ ರೂಪಾಯಿ) ವೌಲ್ಯದ ಸರಕುಗಳನ್ನು ರಫ್ತು ಮಾಡಿತ್ತು.

‘‘ವ್ಯಾಪಾರ ಆದ್ಯತಾ ಒಪ್ಪಂದದಿಂದ ಭಾರತವನ್ನು ಹೊರಹಾಕುವ ನಿರ್ಧಾರವು ಅಂತಿಮವಾಗಿದೆ ಎಂದು ನನಗನಿಸುತ್ತದೆ. ನಾವು ಹೇಗೆ ಮುಂದಕ್ಕೆ ಹೋಗುತ್ತೇವೆ ಹಾಗೂ ಎರಡನೇ ಮೋದಿ ಸರಕಾರದಲ್ಲಿ ನಾವು ಹೇಗೆ ಕೆಲಸ ಮಾಡುತ್ತೇವೆ ಎನ್ನುವುದು ಈಗಿನ ಪ್ರಶ್ನೆಯಾಗಿದೆ’’ ಎಂದು ಅನಾಮಧೇಯರಾಗಿ ಉಳಿಯಬಯಸಿರುವ ಅಮೆರಿಕದ ಅಧಿಕಾರಿ ಹೇಳುತ್ತಾರೆ.

‘‘ನಮ್ಮ ವ್ಯಾಪಾರ ಸಂಬಂಧವನ್ನು ಬೆಳೆಸುವ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬೃಹತ್ ಅವಕಾಶಗಳಿವೆ ಎಂದು ನಾವು ಭಾವಿಸುತ್ತೇವೆ’’ ಎಂದರು.

ವ್ಯಾಪಾರ ತಡೆಗಳ ಹಿನ್ನೆಲೆಯಲ್ಲಿ ಭಾರತವನ್ನು ಆದ್ಯತಾ ವ್ಯಾಪಾರ ಒಪ್ಪಂದದಿಂದ ತೆಗೆಯುವುದಾಗಿ ಟ್ರಂಪ್ ಆಡಳಿತ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News