ಅಧಿಕಾರ ಹಸ್ತಾಂತರ ಒಪ್ಪಂದ ರದ್ದುಪಡಿಸಿದ ಸುಡಾನ್ ಸೇನೆ 9 ತಿಂಗಳಲ್ಲಿ ಚುನಾವಣೆ: ಘೋಷಣೆ

Update: 2019-06-04 17:33 GMT

ಖಾರ್ಟೂಮ್ (ಸುಡಾನ್), ಜೂ. 4: ಪ್ರತಿಭಟನಕಾರರೊಂದಿಗೆ ಮಾಡಿಕೊಂಡಿರುವ ಅಧಿಕಾರ ಹಸ್ತಾಂತರ ಒಪ್ಪಂದವೊಂದನ್ನು ಸುಡಾನ್ ಸೇನೆ ಮಂಗಳವಾರ ರದ್ದುಗೊಳಿಸಿದೆ ಹಾಗೂ ಒಂಬತ್ತು ತಿಂಗಳಲ್ಲಿ ಚುನಾವಣೆ ನಡೆಸುವುದಾಗಿ ಹೇಳಿದೆ.

ಪ್ರತಿಭಟನಕಾರರು ವಾರಗಳಿಂದ ನಡೆಸಿಕೊಂಡು ಬಂದಿರುವ ಧರಣಿಯನ್ನು ಸೇನೆಯು ಬಲಪ್ರಯೋಗದಿಂದ ಮುರಿದ ಒಂದು ದಿನದ ಬಳಿಕ ಅದು ಈ ಘೋಷಣೆಯನ್ನು ಮಾಡಿದೆ.

ಸೇನಾ ದಮನ ಕಾರ್ಯಾಚರಣೆಯಲ್ಲಿ 30ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸುಡಾನ್ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದೆ.

ಮಾಜಿ ಅಧ್ಯಕ್ಷ ಉಮರ್ ಅಲ್-ಬಶೀರ್‌ರ ದಶಕಗಳ ಅವಧಿಯ ಸರ್ವಾಧಿಕಾರಿ ಆಡಳಿತದ ವಿರುದ್ಧ ಜನರು ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ ಬಳಿಕ, ಎಪ್ರಿಲ್‌ನಲ್ಲಿ ಸೇನೆಯು ಅವರನ್ನು ವಜಾಗೊಳಿಸಿತು. ಆದರೆ, ನಾಗರಿಕ ಸರಕಾರಕ್ಕೆ ದೇಶದ ಆಡಳಿತವನ್ನು ಹಸ್ತಾಂತರಿಸುವ ಮುನ್ನ ಮೂರು ವರ್ಷಗಳ ‘ಪರಿವರ್ತನಾ ಅವಧಿ’ ಇರುತ್ತದೆ ಎಂಬುದಾಗಿ ಘೋಷಿಸಿತ್ತು.

ಆದರೆ, ಈ ಯೋಜನೆಯನ್ನು ಕೈಬಿಡಲಾಗಿದೆ ಹಾಗೂ ‘ಪ್ರಾದೇಶಿಕ ಮತ್ತು ಅಂತರ್‌ರಾಷ್ಟ್ರೀಯ ಉಸ್ತುವಾರಿ’ಯಲ್ಲಿ 9 ತಿಂಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಅಬ್ದುಲ್ ಫತ್ತಾಹ್ ಅಲ್-ಬುರ್ಹಾನ್ ಸೋಮವಾರ ಟೆಲಿವಿಶನ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

‘‘ ‘ಅಲಯನ್ಸ್ ಫಾರ್ ಫ್ರೀಡಮ್ ಆ್ಯಂಡ್ ಚೇಂಜ್’ ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದ ರದ್ದುಗೊಳ್ಳುತ್ತದೆ ಹಾಗೂ ಇನ್ನು ಮುಂದೆ ಅದರೊಂದಿಗೆ ಯಾವುದೇ ಮಾತುಕತೆ ನಡೆಯುವುದಿಲ್ಲ. ಹಾಗೂ ಒಂಬತ್ತು ತಿಂಗಳ ಒಳಗೆ ಚುನಾವಣೆ ನಡೆಸಲಾಗುವುದು’’ ಎಂದು ಬುರ್ಹಾನ್ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News