ಶ್ರೀಲಂಕಾ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ

Update: 2019-06-09 16:10 GMT

ಕೊಲಂಬೊ, ಜೂ. 9: ಭಾರತದ ಪ್ರಧಾನಿ ನರೇಂದ್ರ ಮೋದಿ ರವಿವಾರ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಅವರನ್ನು ಭೇಟಿಯಾದರು. 10 ದಿನಗಳ ಒಳಗಡೆ ಮೋದಿ ಅವರು ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಈ ಸಂದರ್ಭ ಭಯೋತ್ಪಾದನೆ ‘‘ಜಂಟಿ ಬೆದರಿಕೆ’’ಯಾಗಿದ್ದು, ಅದನ್ನು ನಿಗ್ರಹಿಸಲು ಸಾಮೂಹಿಕ ಹಾಗೂ ಕೇಂದ್ರೀಕೃತ ಕ್ರಮದ ಅಗತ್ಯ ಇದೆ ಎಂಬುದನ್ನು ಇಬ್ಬರೂ ನಾಯಕರು ಒಪ್ಪಿಕೊಂಡರು.

ಎಪ್ರಿಲ್‌ನಲ್ಲಿ ನಡೆದ ಈಸ್ಟರ್ ಭಯೋತ್ಪಾದಕ ದಾಳಿಯ ಬಳಿಕ ಶ್ರೀಲಂಕಾಕ್ಕೆ ಭೇಟಿ ನೀಡುತ್ತಿರುವ ಮೊದಲನೇ ವಿದೇಶಿ ನಾಯಕ ನರೇಂದ್ರ ಮೋದಿ. ಮೋದಿ ಅವರು ಈ ಭೇಟಿ ಭಯೋತ್ಪಾದಕ ದಾಳಿಯ ಬಳಿಕ ಶ್ರೀಲಂಕಾದೊಂದಿಗೆ ಭಾರತದ ಒಗ್ಗಟ್ಟಿನ ದೃಢೀಕರಣದ ಸಂಕೇತ ಎಂದು ಪರಿಗಣಿಸಲಾಗಿದೆ. ‘‘ಭಯೋತ್ಪಾದನೆ ಜಂಟಿ ಬೆದರಿಕೆ. ಇದನ್ನು ನಿಗ್ರಹಿಸಲು ಸಾಮೂಹಿಕ ಹಾಗೂ ಕೇಂದ್ರೀಕೃತ ಕ್ರಮದ ಅಗತ್ಯ ಇದೆ ಎಂದು ಅಧ್ಯಕ್ಷ ಸಿರಿಸೇನ ಹಾಗೂ ನಾನು ಒಪ್ಪಿಕೊಂಡಿದ್ದೇವೆ. ಸುರಕ್ಷಿತ ಹಾಗೂ ಸಮೃದ್ಧ ಭವಿಷ್ಯಕ್ಕಾಗಿ ಶ್ರೀಲಂಕಾದೊಂದಿಗೆ ಪಾಲುದಾರಿಕೆಯ ಬದ್ಧತೆಯನ್ನು ಭಾರತ ಪುನರುಚ್ಚರಿಸುತ್ತದೆ’’ ಎಂದು ಸಿರಿಸೇನಾ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮೋದಿ ಟ್ವೀಟ್ ಮಾಡಿದ್ದಾರೆ. ಪರಸ್ಪರ ಆಸಕ್ತಿದಾಯಕ ದ್ವಿಪಕ್ಷೀಯ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಪ್ರಧಾನಿ ಮೋದಿ ಗೌರವಾರ್ಥ ಅಧ್ಯಕ್ಷ ಸಿರಿಸೇನಾ ಔತಣಕೂಟ ಏರ್ಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷೀಯ ಸಚಿವಾಲಯಕ್ಕೆ ತೆರಳುವ ದಾರಿಯಲ್ಲಿ ಈಸ್ಚರ್ ಸಂಡೇ ಸ್ಫೋಟ ನಡೆದ ಸಂತ ಆಂಥೊಣಿ ಚರ್ಚೆಗೆ ಭೇಟಿ ನೀಡಿದರು. ಅನಂತರ ಅಧ್ಯಕ್ಷರ ನಿವಾಸಕ್ಕೆ ತೆರಳಿದ ಮೋದಿ ಅವರಿಗೆ ಅಲ್ಲಿ ವಿದ್ಯುಕ್ತ ಸ್ವಾಗತ ನೀಡಲಾಯಿತು. ಮಳೆಯಿಂದ ನೆನೆಯದಂತೆ ಅಧ್ಯಕ್ಷ ಸಿರಿಸೇನಾ ಅವರು ನರೇಂದ್ರ ಮೋದಿ ಅವರಿಗೆ ಕೊಡೆ ಹಿಡಿದರು. ಶ್ರೀಲಂಕಾದಿಂದ ಹಿಂದಿರುಗುವ ಸಂದರ್ಭ ಮಾತನಾಡಿದ ನರೇಂದ್ರ ಮೋದಿ, ‘‘ನಮ್ಮ ಹೃದಯದಲ್ಲಿ ಶ್ರೀಲಂಕಾಕ್ಕೆ ವಿಶೇಷ ಸ್ಥಾನವಿದೆ. ಭಾರತ ಯಾವಾಗಲೂ ನಿಮ್ಮಾಂದಿಗೆ ಇರಲಿದೆ ಎಂದು ನಾನು ಶ್ರೀಲಂಕಾದ ನನ್ನ ಸಹೋದರ ಸಹೋದರಿಯರಿಗೆ ಭರವಸೆ ನೀಡುತ್ತೇನೆ. ಅಲ್ಲದೆ ನಿಮ್ಮ ದೇಶದ ಪ್ರಗತಿಗೆ ಬೆಂಬಲ ನೀಡುತ್ತೇನೆ. ಸ್ಮರಣೀಯವಾದ ಸ್ವಾಗತ ಹಾಗೂ ಆತಿಥ್ಯಕ್ಕೆ ಕೃತಜ್ಞತೆ’’ ಎಂದರು.

ಈಸ್ಟರ್ ಸಂಡೇ ಸ್ಫೋಟ ಸ್ಥಳಕ್ಕೆ ಭೇಟಿ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷೀಯ ಸಚಿವಾಲಯಕ್ಕೆ ತೆರಳುವ ದಾರಿಯಲ್ಲಿ ಈಸ್ಚರ್ ಸಂಡೇ ಸ್ಫೋಟ ನಡೆದ ಸಂತ ಆಂಥೊಣಿ ಚರ್ಚೆಗೆ ಭೇಟಿ ನೀಡಿದರು. ಸ್ಫೋಟ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದ ಮೋದಿ, ಭಯೋತ್ಪಾದನೆಯ ಹೇಡಿತನದ ಕೆಲಸ ಶ್ರೀಲಂಕಾದ ಸ್ಪೂರ್ತಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದರು.

ರಾಜಪಕ್ಷೆಯೊಂದಿಗೆ ಮಾತುಕತೆ

ನರೇಂದ್ರ ಮೋದಿ ಅವರು ಪ್ರತಿಪಕ್ಷದ ನಾಯಕ ಮಹಿಂದ ರಾಜಪಕ್ಷೆ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದರು. ಭಯೋತ್ಪಾದನೆ ನಿಗ್ರಹ, ಭದ್ರತೆ ಹಾಗೂ ಆರ್ಥಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವಿನ ನಿಕಟ ಸಹಯೋಗದ ಅಗತ್ಯದ ಬಗ್ಗೆ ಚರ್ಚೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News