‘ನವ ಭಾರತ’ದಲ್ಲಿ ಭಾರತ-ಜಪಾನ್ ಬಾಂಧವ್ಯ ಇನ್ನಷ್ಟು ಬಲಿಷ್ಠ; ಜಪಾನ್‌ನಲ್ಲಿ ಮೋದಿ

Update: 2019-06-27 18:23 GMT

ಕೋಬೆ (ಜಪಾನ್), ಜೂ. 27: ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯ ‘ನವ ಭಾರತ’ದಲ್ಲಿ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಜಿ20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಜಪಾನ್‌ನ ಕೋಬೆ ನಗರಕ್ಕೆ ಆಗಮಿಸಿರುವ ಮೋದಿ, ಇಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

61 ಕೋಟಿ ಮತದಾರರನ್ನು ಹೊಂದಿರುವ ಜಗತ್ತಿನ ಅತಿ ದೊಡ್ಡ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಭಾಗವಾಗಿರುವುದಕ್ಕಾಗಿ ಜಪಾನ್‌ನ ಭಾರತೀಯ ವಲಸಿಗರನ್ನು ಇದೇ ಸಂದರ್ಭದಲ್ಲಿ ಮೋದಿ ಅಭಿನಂದಿಸಿದರು.

‘‘ಜಗತ್ತಿನೊಂದಿಗೆ ಭಾರತದ ಸಂಬಂಧದ ವಿಷಯಕ್ಕೆ ಬಂದಾಗ, ಜಪಾನ್ ಇದರಲ್ಲಿ ವಿಶಿಷ್ಟ ಸ್ಥಾನವನ್ನು ಪಡೆಯುತ್ತದೆ. ಈ ಸಂಬಂಧ ಶತಮಾನಗಳಷ್ಟು ಹಿಂದಕ್ಕೆ ಹೋಗುತ್ತದೆ. ಉಭಯ ದೇಶಗಳ ನಡುವೆ ತಾವು ಪರಸ್ಪರ ಸಂಬಂಧ ಹೊಂದಿದವರು ಎಂಬ ಭಾವನೆ ಹಾಗೂ ಪರಸ್ಪರರ ಸಂಸ್ಕೃತಿ ಮತ್ತು ನಾಗರಿಕತೆಗೆ ಗೌರವವಿದೆ ಎಂದರು.

‘‘ಬಹುತೇಕ ಎರಡು ದಶಕಗಳ ಹಿಂದೆ, ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಂದಿನ ಜಪಾನ್ ಪ್ರಧಾನಿ ಯೊಶಿರೊ ಮೊರಿ ಎರಡು ದೇಶಗಳ ನಡುವಿನ ಸಂಬಂಧವನ್ನು ಜಾಗತಿಕ ಭಾಗೀದಾರರ ಮಟ್ಟಕ್ಕೆ ಒಯ್ದಿದ್ದರು. 2014ರಲ್ಲಿ ನಾನು ಪ್ರಧಾನಿಯಾದ ಬಳಿಕ, ನನ್ನ ಪ್ರೀತಿಯ ಸ್ನೇಹಿತ (ಜಪಾನ್) ಪ್ರಧಾನಿ ಶಿಂಝೊ ಅಬೆ ಜೊತೆಗಿನ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಅವಕಾಶ ಲಭಿಸಿತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News