ಜಿ20 ಶೃಂಗ: ಮೋದಿ, ಟ್ರಂಪ್ ಸಭೆ

Update: 2019-06-28 17:12 GMT

ಒಸಾಕ (ಜಪಾನ್), ಜೂ. 28: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿಯಾಗಿ, ಇರಾನ್, 5ಜಿ ಸಂಪರ್ಕ ಜಾಲ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಶುಕ್ರವಾರ ಇಲ್ಲಿ ಆರಂಭಗೊಂಡ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.

ಇದೇ ಸಂದರ್ಭದಲ್ಲಿ, ಇತ್ತೀಚೆಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮೂಲಕ ಕಳುಹಿಸಿದ ಪತ್ರವೊಂದರಲ್ಲಿ ‘ಭಾರತದ ಬಗ್ಗೆ ಪ್ರೀತಿ’ಯನ್ನು ವ್ಯಕ್ತಪಡಿಸಿರುವುದಕ್ಕಾಗಿ ಟ್ರಂಪ್‌ಗೆ ಮೋದಿ ಕೃತಜ್ಞತೆ ಸಲ್ಲಿಸಿದರು.

ಟ್ರಂಪ್ ಜೊತೆ ತಾನು ಇರಾನ್, 5ಜಿ, ದ್ವಿಪಕ್ಷೀಯ ಮಾತುಕತೆಗಳು ಮತ್ತು ರಕ್ಷಣಾ ಸಂಬಂಧಗಳ ಬಗ್ಗೆ ಮಾತುಕತೆ ನಡೆಸಲು ಬಯಸುವುದಾಗಿ ಪ್ರಧಾನಿ ಹೇಳಿದರು.

ಇರಾನ್‌ನಿಂದ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ವಿನಾಯಿತಿಯನ್ನು ಅಮೆರಿಕ ಮೇ 2ರಂದು ಕೊನೆಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ. ಅಮೆರಿಕದ ದಿಗ್ಬಂಧನಗಳನ್ನು ಪಾಲಿಸಿರುವ ಭಾರತ ಇರಾನ್‌ನಿಂದ ಮಾಡಿಕೊಳ್ಳಲಾಗುತ್ತಿದ್ದ ಎಲ್ಲ ಆಮದುಗಳನ್ನು ನಿಲ್ಲಿಸಿದೆ.

ಚುನಾವಣಾ ವಿಜಯಕ್ಕಾಗಿ ಮೋದಿಗೆ ಅಭಿನಂದನೆ

ಚುನಾವಣಾ ವಿಜಯಕ್ಕಾಗಿ ಮೋದಿಯನ್ನು ಟ್ರಂಪ್ ಇದೇ ಸಂದರ್ಭದಲ್ಲಿ ಅಭಿನಂದಿಸಿದರು. ಸೇನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳು ಜೊತೆಯಾಗಿ ಕೆಲಸ ಮಾಡುತ್ತವೆ ಎಂದರು.

‘‘ನಿಮ್ಮದು ಬೃಹತ್ ವಿಜಯವಾಗಿದೆ. ಅದಕ್ಕೆ ನೀವು ಅರ್ಹತೆ ಹೊಂದಿದ್ದೀರಿ. ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ನಾವು ಮಹತ್ವದ ವಿಷಯಗಳನ್ನು ಘೋಷಿಸುವವರಿದ್ದೇವೆ’’ ಎಂದು ಟ್ರಂಪ್ ಹೇಳಿದರು.

ಭಯೋತ್ಪಾದನೆ ಮಾನವತೆಗೆ ಎದುರಾದ ಅತಿ ದೊಡ್ಡ ಬೆದರಿಕೆ: ಮೋದಿ

ಭಯೋತ್ಪಾದನೆ ಮಾನವತೆಗೆ ಎದುರಾಗಿರುವ ಅತಿ ದೊಡ್ಡ ಬೆದರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಅದು ಅಮಾಯಕ ಜನರನ್ನು ಕೊಲ್ಲುವುದಷ್ಟೇ ಅಲ್ಲ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸ್ಥಿರತೆಯ ಮೇಲೂ ತೀವ್ರ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಇಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ನಡೆದ ‘ಬ್ರಿಕ್ಸ್’ (ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕ) ದೇಶಗಳ ನಾಯಕರ ಅನೌಪಚಾರಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಡಬ್ಲುಟಿಒ ಬಲಪಡಿಸುವುದು, ಸಬ್ಸಿಡಿ ವಿರುದ್ಧ ಹೋರಾಡುವುದು, ಇಂಧನ ಭ್ರದ್ರತೆಯನ್ನು ಖಾತರಿಪಡಿಸುವುದು ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿ ಕೆಲಸ ಮಾಡುವುದು ಮುಂತಾದ ವಿಷಯಗಳ ಬಗ್ಗೆ ಮೋದಿ ಈ ಸಂದರ್ಭದಲ್ಲಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News