ತಾಲಿಬಾನ್‌ನೊಂದಿಗಿನ ಮಾತುಕತೆ ಅತ್ಯಂತ ಫಲಪ್ರದ: ಅಮೆರಿಕ ನಿಯೋಗ ಸದಸ್ಯನ ಹೇಳಿಕೆ

Update: 2019-07-07 18:16 GMT

ಕಾಬೂಲ್, ಜು.7: ಅಪಘಾನಿಸ್ತಾನದಲ್ಲಿ 18 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ತಾಲಿಬಾನ್‌ನೊಂದಿಗೆ ನಡೆಸುತ್ತಿರುವ ಶಾಂತಿ ಮಾತುಕತೆ ಇದುವರೆಗೆ ಅತ್ಯಂತ ಫಲಪ್ರದವಾಗಿದೆ ಎಂದು ಮಾತುಕತೆಯಲ್ಲಿ ಪಾಲ್ಗೊಂಡಿರುವ ಅಮೆರಿಕ ನಿಯೋಗದ ಸದಸ್ಯ ಝಲ್‌ಮೆ ಖಲಿಝಾದ್ ಹೇಳಿದ್ದಾರೆ.

    ಕಳೆದ ವಾರ ಏಳನೇ ಸುತ್ತಿನ ಮಾತುಕತೆ ಆರಂಭವಾಗಿದೆ. ದಾಳಿ ಆರಂಭಿಸಲು ಮೂಲಸ್ಥಾನವಾಗಿ ಅಪಘಾನಿಸ್ತಾನವನ್ನು ಬಳಸಿಕೊಳ್ಳುವುದಿಲ್ಲ ಎಂದು ತಾಲಿಬಾನ್ ಭರವಸೆ ನೀಡಿದರೆ ಅಪಘಾನಿಸ್ತಾನದಲ್ಲಿರುವ ವಿದೇಶಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದ ಕಳೆದ ವಾರ ಆರಂಭವಾದ ಏಳನೇ ಸುತ್ತಿನ ಮಾತುಕತೆಯ ಪ್ರಧಾನ ವಿಷಯವಾಗಿದೆ. ಶಾಂತಿ ಮಾತುಕತೆಯ ನಾಲ್ಕು ಆಯಾಮಗಳಾದ- ಭಯೋತ್ಪಾದನೆಯನ್ನು ಎದುರಿಸುವ ಭರವಸೆ, ತುಕಡಿಗಳನ್ನು ಹಿಂಪಡೆಯುವುದು, ಅಪಘಾನಿಸ್ತಾನದಲ್ಲಿ ನಡೆಯುವ ಮಾತುಕತೆ ಮತ್ತು ಸಮಾಲೋಚನೆಯಲ್ಲಿ ಪಾಲ್ಗೊಳ್ಳುವುದು, ಶಾಶ್ವತ ಹಾಗೂ ಸಮಗ್ರ ಕದನ ವಿರಾಮ- ವಿಷಯಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದವರು ಹೇಳಿದ್ದಾರೆ. ಶಾಂತಿ ಮಾತುಕತೆ ಮಂಗಳವಾರದಿಂದ ಮತ್ತೆ ಮುಂದುವರಿಯಲಿದೆ.

   ಅಪಘಾನಿಸ್ತಾನದಲ್ಲಿ ನೆಲೆಯೂರಿದ್ದ ತಾಲಿಬಾನ್‌ ಗಳು 2001ರಲ್ಲಿ ಅಮೆರಿಕ ನೇತೃತ್ವದ ಪಡೆಗಳೆದುರು ಹಿಮ್ಮೆಟ್ಟಿದ್ದವು. ಆದರೆ ಬಳಿಕ ಕ್ರಮೇಣ ಹಿಡಿತ ಬಿಗಿಗೊಳಿಸುತ್ತಾ ಬಂದು ಈಗ ಮತ್ತೆ ಅಪಘಾನಿಸ್ತಾನದ ಗಣನೀಯ ಪ್ರದೇಶವನ್ನು ತಮ್ಮ ಹಿಡಿತಕ್ಕೆ ಪಡೆದುಕೊಂಡಿವೆ. 18 ವರ್ಷದ ಸಮಸ್ಯೆಗೆ ಶಾಂತಿ ಮಾತುಕತೆಯಿಂದ ಮಾತ್ರ ಪರಿಹಾರ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸುತ್ತಾ ಬಂದಿರುವ ಅಮೆರಿಕದ ರಾಜತಂತ್ರಜ್ಞ ಖಲಿಝಾದ್, ಅಂತಿಮ ಒಪ್ಪಂದಕ್ಕೆ ಮುನ್ನ ಕೆಲವು ಪ್ರಮುಖ ಚರ್ಚೆ ನಡೆಯಬೇಕಿದೆ ಎಂದಿದ್ದಾರೆ.

  ಅಪಘಾನಿಸ್ತಾನದ ಸೇನೆಗೆ ತರಬೇತಿ ಮತ್ತು ನೆರವು ನೀಡುವ ಉದ್ದೇಶದಿಂದ ಅಮೆರಿಕ ನೇತೃತ್ವದ ನೇಟೊ ಪಡೆಗಳ ಸುಮಾರು 20 ಸಾವಿರ ವಿದೇಶಿ ಸೈನಿಕರ ತುಕಡಿ ಈಗ ಅಪಘಾನಿಸ್ತಾನದಲ್ಲಿದೆ. ಇದರಲ್ಲಿ ಅಮೆರಿಕದ ಪಡೆಗಳು ಭಯೋತ್ಪಾದಕ ದಾಳಿಗೆ ಪ್ರತಿದಾಳಿಯನ್ನೂ ನಡೆಸುತ್ತಿದೆ.

  ತಾಲಿಬಾನ್‌ಗಳೊಂದಿಗಿನ ಶಾಂತಿ ಮಾತುಕತೆಯ ಕರಡು ಒಪ್ಪಂದ ಅಂತಿಮ ಹಂತದಲ್ಲಿದ್ದು ಶಾಂತಿ ಒಪ್ಪಂದಕ್ಕೆ ಸೆಪ್ಟೆಂಬರ್ 1ರೊಳಗೆ ಸಹಿ ಬೀಳುವ ನಿರೀಕ್ಷೆಯಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೊ ಕಳೆದ ತಿಂಗಳು ಕಾಬೂಲ್‌ನಲ್ಲಿ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News