ತೈವಾನ್‌ಗೆ 15,100 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮಾರಾಟಕ್ಕೆ ಅಮೆರಿಕ ಮುಂದು

Update: 2019-07-09 18:30 GMT

ವಾಶಿಂಗ್ಟನ್, ಜು. 9: ಅಬ್ರಾಮ್ಸ್ ಟ್ಯಾಂಕ್‌ಗಳು ಮತ್ತು ಸ್ಟಿಂಗರ್ ಕ್ಷಿಪಣಿಗಳು ಸೇರಿದಂತೆ ತೈವಾನ್‌ಗೆ 2.2 ಬಿಲಿಯ ಡಾಲರ್ (ಸುಮಾರು 15,100 ಕೋಟಿ ರೂಪಾಯಿ) ವೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಪ್ರಸ್ತಾಪಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಸೋಮವಾರ ಹೇಳಿದೆ.

ಅಮೆರಿಕದ ಈ ಕ್ರಮ ಚೀನಾದ ಕೆಂಗಣ್ಣಿಗೆ ಕಾರಣವಾಗಬಹುದಾಗಿದೆ. ಚೀನಾವು ತೈವಾನನ್ನು ತನ್ನದೇ ಭೂಭಾಗದ ಒಂದು ಭಾಗ ಎಂಬುದಾಗಿ ಪರಿಗಣಿಸಿದೆ.

ಸಂಭಾವ್ಯ ಶಸ್ತ್ರಾಸ್ತ್ರ ಒಪ್ಪಂದದ ಪ್ರಸ್ತಾವವನ್ನು ಸಂಸತ್ತು ಕಾಂಗ್ರೆಸ್‌ಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಭದ್ರತೆ ಸಹಕಾರ ಸಂಸ್ಥೆ (ಡಿಎಸ್‌ಸಿಎ) ತಿಳಿಸಿದೆ.

108 ಎಂ1ಎ2ಟಿ ಅಬ್ರಾಮ್ಸ್ ಟ್ಯಾಂಕ್‌ಗಳು, ಸುಮಾರು 250 ಸ್ಟಿಂಗರ್ ಕ್ಷಿಪಣಿಗಳು ಹಾಗೂ ಅವುಗಳಿಗೆ ಪೂರಕವಾದ ಸಲಕರಣೆಗಳು ಮತ್ತು ಬೆಂಬಲ ವ್ಯವಸ್ಥೆಯನ್ನು ಪೂರೈಸುವುದು ಪ್ರಸ್ತಾವದಲ್ಲಿದೆ.

ಚೀನಾ ವಿರೋಧ

ತೈವಾನ್‌ಗೆ 2.2 ಬಿಲಿಯ ಡಾಲರ್ ವೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಪ್ರಸ್ತಾವವನ್ನು ತಕ್ಷಣ ರದ್ದುಪಡಿಸುವಂತೆ ಚೀನಾ ಮಂಗಳವಾರ ಅಮೆರಿಕವನ್ನು ಒತ್ತಾಯಿಸಿದೆ.

ಅಮೆರಿಕದ ಈ ಪ್ರಸ್ತಾವಕ್ಕೆ ‘ತೀವ್ರ ಅತೃಪ್ತಿ ಮತ್ತು ವಿರೋಧ’ ವ್ಯಕ್ತಪಡಿಸಿ ಚೀನಾವು ರಾಜತಾಂತ್ರಿಕ ಮಾರ್ಗದ ಮೂಲಕ ಅಧಿಕೃತ ದೂರುಗಳನ್ನು ಸಲ್ಲಿಸಿದೆ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News