ಹಿಂದೂ ಮಹಿಳೆ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ನಿರಾಕರಿಸಿದ ಬಾಂಗ್ಲಾ ಪ್ರಧಾನಿ ಹಸೀನಾ

Update: 2019-07-21 17:28 GMT

 ಢಾಕಾ,ಜು.21: ತನ್ನ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ದಮನಿಸಲಾಗುತ್ತಿದೆಯೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದೆ ದೂರಿದ ಬಾಂಗ್ಲಾದ ಹಿಂದೂ ಮಹಿಳೆಯ ವಿರುದ್ಧ ದೇಶದ್ರೋಹದ ಆರೋಪವನ್ನು ದಾಖಲಿಸುವ ಬಾಂಗ್ಲಾ ಸರಕಾರದ ಯೋಜನೆಗೆ ಅನುಮೋದನೆ ನೀಡಲು ಪ್ರಧಾನಿ ಶೇಖ್ ಹಸೀನಾ ನಿರಾಕರಿಸಿದ್ದಾರೆ.

ಬಾಂಗ್ಲಾದೇಶ್ ಹಿಂದೂ, ಬೌದ್ಧ,ಕ್ರೈಸ್ತ ಏಕತಾ ಮಂಡಳಿ (ಎಚ್‌ಬಿಸಿಯುಸಿ)ಯ ಸಂಘಟನಾ ಕಾರ್ಯದರ್ಶಿಯಾದ ಪ್ರಿಯಾ ಸಾಹಾ ಅವರು ಜುಲೈ 19ರಂದು ಅಮೆರಿಕದ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಟ್ರಂಪ್ ಜೊತೆಗೆ ಅವರು ನಡೆಸಿದ ಮಾತುಕತೆಯ ದೃಶ್ಯಗಳಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ ತಾಯ್ನಿಡಾದ ಬಾಂಗ್ಲಾದಲ್ಲಿ ಭಾರೀ ವಿವಾದ ಸೃಷ್ಟಿಸಿದೆ.

  ವಿಡಿಯೋದಲ್ಲಿ ಆಕೆ ತನ್ನನ್ನು ಬಾಂಗ್ಲಾ ಪ್ರಜೆ ಎಂಬುದಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಸುಮಾರು 30.70 ಲಕ್ಷ ಮಂದಿ ನಾಪತ್ತೆಯಾಗಿದ್ದಾರೆಂದು ಅಮೆರಿಕ ಅಧ್ಯಕ್ಷರಿಗೆ ತಿಳಿಸಿದ್ದರು.

ಪ್ರಿಯಾ ಸಾಹಾ ಅವರ ವಿವಾದಾತ್ಮಕ ಹೇಳಿಕೆಯನ್ನು, ಬಾಂಗ್ಲಾದ ರಸ್ತೆ ಸಾರಿಗೆ ಸಚಿವ ಹಾಗೂ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ ಉಬೈದುಲ್ ಖಾದರ್ ಖಂಡಿಸಿದ್ದಾರೆ. ಪ್ರಿಯಾ ಅವರು, ‘‘ ಸುಳ್ಳು ಹಾಗೂ ದುರುದ್ದೇಶದ ಮತ್ತು ದ್ರೋಹಯುತವಾದ ಹೇಳಿಕೆಗಳನ್ನು ನೀಡಿದ್ದಾರೆ’’ ಎಂಬುದಾಗಿ ಅವರು ಟೀಕಿಸಿದ್ದಾರೆ.

ಆದಾಗ್ಯೂ ಪ್ರಿಯಾ ಸಾಹಾ ಅವರ ಹೇಳಿಕೆಗಳ ಬಗ್ಗೆ ಯಾವುದೇ ವಿವರಣೆಯನ್ನು ಪಡೆಯದೆ ಆಕೆಯ ವಿರುದ್ಧ ದೇಶದ್ರೋಹದ ಆರೋಪಗಳನ್ನು ದಾಖಲಿಸಲು ಹಸೀನಾ ಅನುಮೋದನೆ ನೀಡಿಲ್ಲವೆಂದು ಖಾದರ್ ತಿಳಿಸಿದ್ದಾರೆ. ಆದರೆ ತಾನು ಟ್ರಂಪ್ ಅವರಿಗೆ ಏನನ್ನು ಹೇಳಲು ಬಯಸಿದ್ದೆ ಎಂಬ ಬಗ್ಗೆ ಪ್ರಿಯಾ ಸಾಹಾ ಅವರು ಸಾರ್ವಜನಿಕ ಹೇಳಿಕೆಯೊಂದನ್ನು ನೀಡಬೇಕೆಂದು ಖಾದರ್ ಆಗ್ರಹಿಸಿದ್ದಾರೆ.

ಖಾದರ್ ಪ್ರತಿಕ್ರಿಯೆ ನೀಡಿದ ಕೆಲವೇ ತಾಸುಗಳ ಬಳಿಕ, ಬಾಂಗ್ಲಾದ ಇಬ್ಬರು ನ್ಯಾಯಾಧೀಶರು ಪ್ರಿಯಾ ಸಾಹು ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಢಾಕಾದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೇಶದ್ರೋಹದ ಆರೋಪವನ್ನು ಹೊರಿಸಿ, ಮೊಕದ್ದಮೆ ಹೂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News