ತಂಗಿಯನ್ನು ರಕ್ಷಿಸಲು ಯತ್ನಿಸುತ್ತಿರುವ ಸಿರಿಯನ್ ಬಾಲಕಿಯರ ಚಿತ್ರಕ್ಕೆ ಮರುಗಿದ ಜಗತ್ತು

Update: 2019-07-27 06:36 GMT
Photo: AFP

ಬಿನ್ನಿಶ್: ಮೈಯ್ಯಿಡೀ ಧೂಳು ತುಂಬಿದ್ದ ಹಾಗೂ ಬಾಂಬ್ ದಾಳಿಗೆ ತುತ್ತಾದ ತಮ್ಮ ಮನೆಯ  ಅವಶೇಷಗಳಡಿಯಲ್ಲಿ ಸಿಲುಕಿದ್ದ ಇಬ್ಬರು ಸಿರಿಯನ್ ಬಾಲಕಿಯರು ಕಟ್ಟಡದ ಹೊರಕ್ಕೆ ಇಣುಕುತ್ತಿದ್ದ ತಮ್ಮ ಪುಟ್ಟ ತಂಗಿಯನ್ನು ಆಕೆಯ ಅಂಗಿ ಹಿಡಿದೆಳೆದು ತಮ್ಮ ಪಕ್ಕ ಸೆಳೆದುಕೊಳ್ಳಲು ಯತ್ನಿಸುತ್ತಿರುವ ಮನಕಲಕುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರ ಹಿಂದೆ ಇದ್ದ ಒಬ್ಬ ವ್ಯಕ್ತಿ ತನ್ನೆದುರಿನ ದೃಶ್ಯವನ್ನು ನೋಡಿ ತನ್ನ ಕೈಯ್ಯನ್ನು ಹಣೆಗೆ ಚಚ್ಚಿಕೊಳ್ಳುತ್ತಿರುವುದೂ ಕಾಣಿಸುತ್ತದೆ.

ಸಿರಿಯಾದ ವಾಯುವ್ಯ ಇಡ್ಲಿಬ್ ಪ್ರಾಂತ್ಯದ ಅರಿಹಾ ಪಟ್ಟಣದಲ್ಲಿ ಯುದ್ಧ ವಿಮಾನಗಳ ದಾಳಿಯ ಕೆಲವೇ ಕ್ಷಣಗಳ ನಂತರ ಸ್ಥಳೀಯ ಸುದ್ದಿ ಸಂಸ್ಥೆ ಎಸ್‍ವೈ 24 ಇದರ ಛಾಯಾಗ್ರಾಹಕ ಬಶರ್ ಅಲ್-ಶೇಖ್ ಈ ಚಿತ್ರವನ್ನು ಕ್ಲಿಕ್ಕಿಸಿದ್ದರು. ಈ ಪ್ರದೇಶದಲ್ಲಿ ಡಮಾಸ್ಕಸ್ ಮತ್ತದರ ಮಿತ್ರ ದೇಶ ರಷ್ಯಾ ಎಪ್ರಿಲ್ ಅಂತ್ಯದಿಂದ ಆರಂಭಗೊಂಡು ನಿಯಮಿತವಾಗಿ ದಾಳಿ ನಡೆಸುತ್ತಲೇ ಇವೆ.

ಈ ಚಿತ್ರದಲ್ಲಿ ಕಾಣಿಸುವ ಮೂವರು ಬಾಲಕಿಯರ ಪೈಕಿ ಒಬ್ಬಾಕೆ ಮೃತಪಟ್ಟಿದ್ದು ಇನ್ನಿಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ತನ್ನ ಪುಟ್ಟ ಸೋದರಿಯ ಹಸಿರು ಅಂಗಿಯನ್ನು ಹಿಡಿಯಲು ಯತ್ನಿಸುತ್ತಿರುವ ರಿಹಾಮ್ ಅಲ್ ಅಬ್ದುಲ್ಲಾ ಮೃತಪಟ್ಟಿದ್ದರೆ ಆ ಮಗು ಟೌಕ  ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ತಲೆಗಾದ ಗಾಯಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮೂರನೇ ಬಾಲಕಿಗೆ ಎದೆಯ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಆಕೆಯ ಸ್ಥಿತಿ ಸ್ಥಿರವಾಗಿದೆ. ವಾಯು ದಾಳಿ ನಡೆದ ಸಂದರ್ಭ ಆರು ಸೋದರಿಯರು ಹಾಗೂ ಅವರ ಹೆತ್ತವರು ಮನೆಯಲ್ಲಿದ್ದರು. ಬಾಲಕಿಯರ ತಾಯಿ ಹಾಗೂ ಇನ್ನೊಬ್ಬ ಸೋದರಿ ಕೂಡ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News