ಹಾಂಕಾಂಗ್: ಗೂಂಡಾಗಳ ಹಲ್ಲೆ ಪ್ರತಿಭಟಿಸಿ ಬೃಹತ್ ಧರಣಿ

Update: 2019-07-27 16:44 GMT

ಹಾಂಕಾಂಗ್, ಜು. 27: ಕಳೆದ ವಾರಾಂತ್ಯದಲ್ಲಿ ಚೀನಾ ಗಡಿಯ ಸಮೀಪ ಪ್ರಜಾಪ್ರಭುತ್ವ ಪರ ಹೋರಾಟಗಾರರ ಮೇಲೆ ಆಕ್ರಮಣ ನಡೆಸಿದ ಭೂಗತ ಗ್ಯಾಂಗ್ ಸದಸ್ಯರ ವಿರುದ್ಧ ಹಾಂಕಾಂಗ್ ಜನರು ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅದೇ ವೇಳೆ, ಅನುಮತಿಯಿಲ್ಲದೆ ಮೆರವಣಿಗೆ ನಡೆಸಿರುವುದಕ್ಕಾಗಿ ಪೊಲೀಸರು ಪ್ರತಿಭಟನಕಾರರ ಮೇಲೆ ಹಲವು ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು.

ಯುವೆನ್ ಲಾಂಗ್ ಎಂಬಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ನಿಜವಾದ ಕದನ ನಡೆಯಿತು. ಕೆಲವು ಪ್ರತಿಭಟನಕಾರರು ಪೊಲೀಸರತ್ತ ವಸ್ತುಗಳನ್ನು ಎಸೆದರು ಹಾಗೂ ಪೊಲೀಸ್ ವ್ಯಾನೊಂದನ್ನು ಸುತ್ತುವರಿದರು.

 ಕಳೆದ ರವಿವಾರ ಯುವೆನ್ ಲಾಂಗ್ ರೈಲು ನಿಲ್ದಾಣದಲ್ಲಿ ಸರಕಾರ ವಿರೋಧಿ ಪ್ರತಿಭಟನಕಾರರು ಮತ್ತು ಸಾರ್ವಜನಿಕರ ಮೇಲೆ ಲಾಠಿಗಳನ್ನು ಹೊಂದಿದ್ದ ಬಿಳಿ ಟಿ-ಶರ್ಟ್‌ಗಳನ್ನು ಧರಿಸಿದ್ದ ಪುಂಡರ ಗುಂಪೊಂದು ಆಕ್ರಮಣ ನಡೆಸಿತ್ತು. ಈ ಘಟನೆಯಲ್ಲಿ ಕನಿಷ್ಠ 45 ಮಂದಿ ಗಾಯಗೊಂಡಿದ್ದರು. ಅಂದಿನಿಂದ ಹಾಂಕಾಂಗ್ ಆಡಳಿತದ ಮೇಲೆ ಜನರ ಆಕ್ರೋಶ ಹೆಚ್ಚಾಗಿದೆ.

ಪೊಲೀಸರ ಅತಿ ಬಲ ಪ್ರಯೋಗವನ್ನು ಖಂಡಿಸಿ ಹಾಗೂ ಬಂಧಿತರನ್ನು ನಿಶ್ಶರ್ತವಾಗಿ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಸಾವಿರಾರು ಮಂದಿ ಹಾಂಕಾಂಗ್‌ನಲ್ಲಿ ಮೆರವಣಿಗೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News