ಪಾಕ್ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ ಟ್ರಂಪ್: ವಿದೇಶಾಂಗ ಸಚಿವ ಖುರೇಶಿ

Update: 2019-07-28 18:11 GMT

ಇಸ್ಲಾಮಾಬಾದ್,ಜು.28: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ವಾಶಿಂಗ್ಟನ್ ಭೇಟಿಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತ ಹಾಗೂ ಪಾಕ್ ನಡುವೆ ಮಧ್ಯಸ್ಥಿಕೆಯ ಕೊಡುಗೆ ನೀಡಿರುವುದು ಪಾಕಿಸ್ತಾನದ ನಿರೀಕ್ಷೆಗಿಂತಲೂ ಮಿಗಿಲಾಗಿದೆ’’ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಶಿ ಹೇಳಿದ್ದಾರೆ.

 ಖಾಸಗಿ ಸುದ್ದಿ ವಾಹಿನಿಗೆ ರವಿವಾರ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕಾಶ್ಮೀರವು ಒಂದು ‘ಸಂಘರ್ಷದ ಕೇಂದ್ರಬಿಂದು’ವಾಗಿದ್ದು, ಅದಕ್ಕೆ ತುರ್ತು ಪರಿಹಾರದ ಅಗತ್ಯವಿದೆಯೆಂಬುದನ್ನು ಪ್ರಧಾನಿ ಇಮ್ರಾನ್ ಅವರು ಅಮೆರಿಕ ಆಡಳಿತಕ್ಕೆ ಮನವರಿಕೆ ಮಾಡುವಲ್ಲಿ ಸಫಲರಾಗಿದ್ದಾರೆಂದು ಖುರೇಶಿ ತಿಳಿಸಿದರು.

 ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಟ್ರಂಪ್ ಅವರ ಕೊಡುಗೆಯನ್ನು ಭಾರತ ದೃಢವಾಗಿ ತಿರಸ್ಕರಿಸಿದೆ. ಪಾಕಿಸ್ತಾನದ ಜೊತೆಗೆ ಇತ್ಯರ್ಥವಾಗದೆ ಉಳಿದಿರುವ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳಬೇಕೆಂಬುದು ಹೊಸದಿಲ್ಲಿಯ ಸ್ಥಿರವಾದ ನಿಲುವಾಗಿದೆಯೆಂದು ಭಾರತ ಸರಕಾರ ಈಗಾಗಲೇ ದೃಢಪಡಿಸಿದೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಭಾರತದ ಅಚಲವಾದ ನಿಲುವಿನಿಂದಾಗಿ ಭಾರೀ ಬೆಲೆ ತೆರಬೇಕಾಗಿ ಬಂದಿದೆಯೆಂದು ಪಾಕ್ ಹೇಳಿದೆ ಹಾಗೂ ಕಾಶ್ಮೀರ ಕಣಿವೆಯಲ್ಲಿನ ಪರಿಸ್ಥಿತಿ ಹದಗೆಡುತ್ತಿದೆ ಎಂದು ಖುರೇಷಿ ಹೇಳಿದರು. ಪಾಕಿಸ್ತಾನವು ಶಾಂತಿ ಪ್ರಿಯ ದೇಶವಾಗಿದೆ ಹಾಗೂ ಭಾರತ ಸೇರಿದಂತೆ ಇಡೀ ಪ್ರದೇಶದಲ್ಲಿ ಶಾಂತಿಸ್ಥಾಪನೆಯ ಹಂಬಲವನ್ನು ಅದು ಹೊಂದಿರುವುದಾಗಿ ಇಮ್ರಾನ್ ಖಾನ್ ಅವರಿಗೆ ಅಮೆರಿಕ ಅಧ್ಯಕ್ಷರಿಗೆ ತಿಳಿಸಿದ್ದಾರೆಂದು ಖುರೇಶಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News