ಕಾಶ್ಮೀರ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಿ; ಟ್ರಂಪ್‌ರನ್ನು ಮತ್ತೆ ಒತ್ತಾಯಿಸಿದ ಇಮ್ರಾನ್

Update: 2019-08-05 16:53 GMT

ಕಾಶ್ಮೀರ ವಿವಾದ ಇತ್ಯರ್ಥಪಡಿಸಲು ಮಧ್ಯಸ್ಥಿಕೆ ವಹಿಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ. ‘‘ರಾಜ್ಯದಲ್ಲಿನ ಪರಿಸ್ಥಿತಿ ಪ್ರಾದೇಶಿಕ ಬಿಕ್ಕಟ್ಟು ಆಗಿ ಉಲ್ಬಣಗೊಳ್ಳುವ ಎಲ್ಲ ಸಾಧ್ಯತೆಗಳು ಇವೆ’’ ಎಂದು ಅವರು ರವಿವಾರ ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ ಇಮ್ರಾನ್ ಈ ಹೇಳಿಕೆ ನೀಡಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ನೆಲೆಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ಹಾಗೂ ಭಾರತ ಕ್ಲಸ್ಟರ್ ಬಾಂಬ್‌ಗಳನ್ನು ಬಳಸಿದೆ ಎಂಬ ಆರೋಪಗಳ ಬಗ್ಗೆ ಚರ್ಚಿಸಲು ಕರೆಯಲಾದ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯ ಅಧ್ಯಕ್ಷತೆಯನ್ನೂ ಇಮ್ರಾನ್ ಖಾನ್ ವಹಿಸಿದರು.

ತಾನು ಕ್ಲಸ್ಟರ್ ಬಾಂಬ್‌ಗಳನ್ನು ಬಳಸಿದ್ದೇನೆ ಎಂಬ ಆರೋಪಗಳನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ.

ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯಲ್ಲಿ ರಕ್ಷಣಾ ಸಚಿವ ಪರ್ವೇಝ್ ಖಟ್ಟಕ್, ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ, ಸೇನಾ ಮುಖ್ಯಸ್ಥ ಜನರಲ್ ಕಮರ್ ಭಾಜ್ವ ಮತ್ತು ಉನ್ನತ ನಾಗರಿಕ ಮತ್ತು ಸೇನಾ ನಾಯಕರು ಭಾಗವಹಿಸಿದ್ದರು.

‘‘ಕಾಶ್ಮೀರದ ಬಗ್ಗೆ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಟ್ರಂಪ್ ನೀಡಿದ್ದಾರೆ. ಭಾರತೀಯ ಆಕ್ರಮಣಕಾರಿ ಪಡೆಗಳ ನೂತನ ಆಕ್ರಮಣಕಾರಿ ಕೃತ್ಯಗಳ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಹಾಗಾಗಿ, ಅಮೆರಿಕದ ಮಧ್ಯಸ್ಥಿಕೆಗೆ ಇದು ಸಕಾಲ. ಇಲ್ಲದಿದ್ದರೆ, ಈ ಸಮಸ್ಯೆ ಪ್ರಾದೇಶಿಕ ಬಿಕ್ಕಟ್ಟು ಆಗಿ ಉಲ್ಬಣಗೊಳ್ಳುವ ಸಾಧ್ಯತೆಗಳನ್ನು ಹೊಂದಿದೆ’’ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News