ಕುಲಭೂಷಣ್ ಜಾಧವ್‌ಗೆ ‘ತಡೆರಹಿತ ರಾಜತಾಂತ್ರಿಕ ಸಂಪರ್ಕ’ ಅಸಾಧ್ಯ: ಪಾಕಿಸ್ತಾನ

Update: 2019-08-08 16:01 GMT

ಇಸ್ಲಾಮಾಬಾದ್, ಆ. 8: ಪಾಕಿಸ್ತಾನದಲ್ಲಿ ಬಂಧನದಲ್ಲಿರುವ ಭಾರತೀಯ ಕುಲಭೂಷಣ್ ಜಾಧವ್‌ಗೆ ‘ತಡೆರಹಿತ ರಾಜತಾಂತ್ರಿಕ ಸಂಪರ್ಕ’ ಒದಗಿಸಬೇಕೆಂಬ ಭಾರತದ ಕೋರಿಕೆಯನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ.

ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಒದಗಿಸುವುದಾಗಿ ಪಾಕಿಸ್ತಾನ ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಆದರೆ, ಈಗಿನ ರೂಪದಲ್ಲಿರುವ ರಾಜತಾಂತ್ರಿಕ ಸಂಪರ್ಕದ ಕೊಡುಗೆಯನ್ನು ಭಾರತ ಆಗಸ್ಟ್ 3ರಂದು ತಿರಸ್ಕರಿಸಿತ್ತು.

ರಾಜತಾಂತ್ರಿಕ ಸಂಬಂಧಗಳ ಕುರಿತ ವಿಯೆನ್ನಾ ಒಡಂಬಡಿಕೆಯನ್ವಯ ಪಾಕಿಸ್ತಾನವು ಕುಲಭೂಷಣ್ ಜಾಧವ್‌ರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಜುಲೈ 17ರಂದು ನೀಡಿದ ತೀರ್ಪಿನಲ್ಲಿ ಹೇಗ್‌ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯ ಹೇಳಿದೆ ಹಾಗೂ ಜಾಧವ್‌ಗೆ ನೀಡಿರುವ ಮರಣ ದಂಡನೆಯನ್ನು ಮರುಪರಿಶೀಲಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ.

ಈ ತೀರ್ಪಿನ ಆಧಾರದಲ್ಲಿ ಪಾಕಿಸ್ತಾನವು ಕುಲಭೂಷಣ್ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಬೇಕು ಎಂದು ಭಾರತ ಕೋರಿತ್ತು.

ಈ ಹಿನ್ನೆಲೆಯಲ್ಲಿ, ಹಲವು ಶರತ್ತುಗಳ ಆಧಾರದಲ್ಲಿ ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕವನ್ನು ಕಲ್ಪಿಸಲು ಪಾಕಿಸ್ತಾನ ಮುಂದೆ ಬಂದಿತ್ತು. ಆದರೆ, ಇದನ್ನು ತಿರಸ್ಕರಿಸಿರುವ ಭಾರತ, ಜಾಧವ್‌ಗೆ ನಿರಂತರ ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಬೇಕು ಎಂದಿತ್ತು.

ಇದಕ್ಕೆ ಈಗ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಜಾಧವ್‌ಗೆ ನಿರಂತರ ರಾಜತಾಂತ್ರಿಕ ಸಂಪರ್ಕ ಒದಗಿಸುವುದು ಸಾಧ್ಯವಿಲ್ಲ ಎಂದಿದೆ.

 ನಿವೃತ್ತ ನೌಕಪಡೆ ಅಧಿಕಾರಿಯಾಗಿರುವ ಜಾಧವ್‌ರನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ಇರಾನ್‌ನಿಂದ ಎಳೆದೊಯ್ದು ಬಂಧಿಸಿದ್ದವು ಹಾಗೂ ಸೇನಾ ನ್ಯಾಯಾಲಯವೊಂದು ಅವರಿಗೆ ಮರಣ ದಂಡನೆ ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News