ಬಾಂಗ್ಲಾ: ಡೆಂಗ್ ಮಹಾಮಾರಿಗೆ ಕನಿಷ್ಠ 40 ಬಲಿ

Update: 2019-08-15 16:36 GMT

ಢಾಕಾ, ಆ.13: ಬಾಂಗ್ಲಾ ದೇಶದಲ್ಲಿ ಡೆಂಗ್ ಜ್ವರದ ಪಿಡುಗು ತಾಂಡವವಾಡುತ್ತಿದ್ದು, ಕನಿಷ್ಠ 40 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಸಾವಿರಾರು ಡೆಂಗ್ ರೋಗಿಗಳು ತುಂಬಿತುಳುಕುತ್ತಿದ್ದು, ಅವರಿಗೆ ಸಮರ್ಪಕ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಪರದಾಡುತ್ತಿವೆ.

ಸಾಮಾನ್ಯವಾಗಿ ಜೂನ್ ಹಾಗೂ ಸೆಪ್ಟೆಂಬರ್ ನಡುವಿನ ಮುಂಗಾರು ಋತುವಿನಲ್ಲಿ ಬಾಂಗ್ಲಾದಲ್ಲಿ ಡೆಂಗ್ ಹಾವಳಿ ತಲೆಯೆತ್ತುತ್ತದೆ. ಆದರೆ ಈ ಬಾರಿ ಕಾಯಿಲೆಯು ವ್ಯಾಪಕವಾಗಿ ಹರಡಿದ್ದು, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ.

 ಕಳೆದ ಜೂನ್‌ನಿಂದೀಚೆಗೆ 44 ಸಾವಿರ ಮಂದಿ ಡೆಂಗ್ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ 2100 ಮಂದಿ ಕಳೆದ ಸೋಮವಾರ ಒಂದೇ ದಿನದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಮವಾರದವರೆಗೆ ಡೆಂಗ್ ಜ್ವರದಿಂದಾಗಿ 40 ಮಂದಿ ಅಸುನೀಗಿದ್ದಾರೆಂದು ಆರೋಗ್ಯ ಸಚಿವಾಲಯದ ಅಧಿಕಾರಿ ಆಯೇಶಾ ಆಖ್ತರ್ ತಿಳಿಸಿದ್ದಾರೆ.

ಆದರೆ ಸ್ಥಳೀಯ ಮಾಧ್ಯಮಗಳು ಡೆಂಗ್ ಜ್ವರದಿಂದಾಗಿ ಮೃತರಾದವರ ಸಂಖ್ಯೆ ಕಳೆದ ವಾರ 40 ದಾಟಿದೆ ಎಂದು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News