ಅಮೆರಿಕದಲ್ಲಿ ಮತ್ತೆ ಶೂಟೌಟ್: 6 ಪೊಲೀಸರು ಗಾಯ

Update: 2019-08-15 16:43 GMT

ವಾಶಿಂಗ್ಟನ್, ಆ.15: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಬುಧವಾರ ಮಾದಕದ್ರವ್ಯ ವ್ಯಸನಿಯೊಬ್ಬನ ನಿವಾಸದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಯತ್ನಿಸಿದ ಪೊಲೀಸರು ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.

     ಗಾಯಾಳು ಪೊಲೀಸರು ಸೂಕ್ತ ಚಿಕಿತ್ಸೆ ಪಡೆದ ಆನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಳೆದ 30 ವರ್ಷಗಳಲ್ಲಿ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಗಾಯಗೊಂಡಿರುವುದನ್ನು ತಾನು ಕಂಡಿಲ್ಲವೆಂಮದು ಪೊಲೀಸ್ ಆಯುಕ್ತ ರಿಚರ್ಡ್ ರೋಸ್ ಜೂನಂ ಹೇಳುತ್ತಾರೆ. ಈ ತಿಂಗಳ ಆರಂಭದಲ್ಲಿ ನಡೆದ ಅಮೆರಿಕದ ಡೇಟನ್, ಓಹಿಯೊ ಹಾಗೂ ಅಲ್ ಪಾಸ್ಸೊ ನಗರಗಳಲ್ಲಿ ನಡೆದ ಶೂಟೌಟ್ ಘಟನೆಗಳಲ್ಲಿ 31 ಮಂದಿ ಮೃತಪಟ್ಟಿದ್ದರು. ಶಂಕಿತ ದಾಳಿಕೋರನ ಮನೆಯಲ್ಲಿ ಸಿಲುಕಿಕೊಂಡಿದ್ದ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳನ್ನು ಸಾಯಂಕಾಲದ ವೇಳೆಗೆ ಬಂಧಮುಕ್ತಗೊಳಿಸಲಾಗಿದೆಯೆಂದು ರೊಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು. ಕಟ್ಟಡದೊಳಗೆ ಸಿಲುಕಿಕೊಂಡಿದ್ದ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳನ್ನು ಸಂಜೆಯ ವೇಳೆಗೆ ಸುರಕ್ಷಿತವಾಗಿ ಪಾರು ಮಾಡಲಾಗಿದೆ. ಮನೆಯಿಂದ ಹೊರಬರುವಂತೆ ಆರೋಪಿಯ ಮನವೊಲಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದು, ಆತ ಶರಣಾಗಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

  ಕಾರ್ಯಾಚರಣೆಯ ವೇಳೆ ಗರಿಷ್ಠ ಸಂಯಮವನ್ನು ಪ್ರದರ್ಶಿಸಿದ್ದಕ್ಕಾಗಿ ಫಿಲಡೆಲ್ಫಿಯಾದ ಮೇಯರ್ ಜಿಮ್ ಕೆನ್ನಿ ಅವರು ನಗರದ ಪೊಲೀಸ್ ಇಲಾಖೆಯನ್ನು ಪ್ರಶಂಸಿದ್ದಾರೆ. ಆದರೆ ಹೆಚ್ಚುತ್ತಿರುವ ಬಂದೂಕು ಹಿಂಸಾಚಾದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅವರು ಅಮೆರಿಕದ ರಾಜಕೀಯ ನಾಯಕರಿಗೆ ಕರೆ ನೀಡಿದ್ದಾರೆ. ಅಮೆರಿಕದಲ್ಲಿ ಬಂದೂಕುಗಳ ಬಳಕೆಯನ್ನು ನಿಯಂತ್ರಿಸುವ ಕಾನೂನನ್ನು ಬಿಗಿಗೊಳಿಸಬೇಕೆಂಬ ವಿಷಯದಲ್ಲಿ ಅಮೆರಿಕದಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News