ಪಾಕ್ ಪತ್ರಕರ್ತನ ಕೈಕುಲುಕಿದ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಅಕ್ಬರುದ್ದೀನ್

Update: 2019-08-17 14:56 GMT

ವಿಶ್ವಸಂಸ್ಥೆ, ಆ. 17: ಭಾರತ ಮತ್ತು ಪಾಕಿಸ್ತಾನಗಳ ನಡುವೆ ಮಾತುಕತೆಗಳ ಕೊರತೆಯಿದೆ ಎಂದು ದೂರಿದ ಪಾಕಿಸ್ತಾನದ ಪತ್ರಕರ್ತರೊಬ್ಬರೊಂದಿಗೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯದ್ ಅಕ್ಬರುದ್ದೀನ್ ನಡೆದುಕೊಂಡ ರೀತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಈ ಪತ್ರಕರ್ತನ ಮೂಲಕ ಅಕ್ಬರುದ್ದೀನ್ ನೆರೆಯ ದೇಶಕ್ಕೆ ಸ್ನೇಹದ ಹಸ್ತವನ್ನು ಚಾಚಿದ್ದಾರೆ.

 ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಅಕ್ಬರುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಆಗ ಪಾಕಿಸ್ತಾನದ ಹಿರಿಯ ಪತ್ರಕರ್ತರೊಬ್ಬರು, ‘‘ನೀವು ಪಾಕಿಸ್ತಾನದೊಂದಿಗೆ ಮಾತುಕತೆ ಯಾವಾಗ ಆರಂಭಿಸುತ್ತೀರಿ?’’ ಎಂದು ಪ್ರಶ್ನಿಸಿದರು.

ಆಗ ವೇದಿಕೆಯಲ್ಲಿ ತನ್ನ ಕುರ್ಚಿಯಿಂದ ಎದ್ದ ಭಾರತೀಯ ರಾಯಭಾರಿ ಪಾಕಿಸ್ತಾನದ ಪತ್ರಕರ್ತನ ಬಳಿ ಹೋಗಿ, ‘‘ನಿಮ್ಮ ಬಳಿಗೆ ಬರುವ ಮೂಲಕ ನಾನು ಈ ಪ್ರಕ್ರಿಯೆಯನ್ನು ಆರಂಭಿಸುತ್ತೇನೆ. ನಿಮ್ಮ ಕೈ ಕೊಡಿ’’ ಎಂದರು.

‘‘ನಾವು ಶಿಮ್ಲಾ ಒಪ್ಪಂದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ನಾವು ಈಗಾಗಲೇ ಸ್ನೇಹದ ಹಸ್ತವನ್ನು ಚಾಚಿದ್ದೇವೆ ಎನ್ನುವುದನ್ನು ನಾನು ನಿಮ್ಮ ಗಮನಕ್ಕೆ ತರುತ್ತೇನೆ’’ ಎಂದು ಅಕ್ಬರುದ್ದೀನ್ ನುಡಿದರು.

ಮೊದಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾಗಿದ್ದ ಅಕ್ಬರುದ್ದೀನ್, ಪ್ರಧಾನಿ ನರೇಂದ್ರ ಮೋದಿಯ ವರ ವಿದೇಶ ಪ್ರವಾಸಗಳ ವೇಳೆ ಅವರ ವಕ್ತಾರರೂ ಆಗಿದ್ದರು.

ಅವರು ತನ್ನ ನೇರ ನಡೆ, ಔಪಚಾರಿಕತೆ ಮತ್ತು ಹಾಸ್ಯದ ಮೂಲಕ ‘ನಿಭಾಯಿಸುವುದು ಕಷ್ಟ’ ಎಂದು ಭಾವಿಸಲಾಗಿರುವ ವಿಶ್ವಸಂಸ್ಥೆಯ ಪತ್ರಕರ್ತರನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ.

ಚೀನಾ, ಪಾಕ್ ರಾಯಭಾರಿಗಳತ್ತ ಕುಟುಕಿದ ಅಕ್ಬರುದ್ದೀನ್

ಅದೇ ವೇಳೆ, ಸೈಯದ್ ಅಕ್ಬರುದ್ದೀನ್ ಚೀನಾದ ಖಾಯಂ ಪ್ರತಿನಿಧಿ ಝಾಂಗ್ ಜುನ್ ಮತ್ತು ಪಾಕಿಸ್ತಾನದ ಖಾಯಂ ಪ್ರತಿನಿಧಿ ಮಲೀಹಾ ಲೋಧಿ ಅವರನ್ನು ಕುಟುಕಿದರು. ಈ ಇಬ್ಬರು ಪ್ರತಿನಿಧಿಗಳು ತಮ್ಮ ಹೇಳಿಕೆಗಳನ್ನು ಓದಿದ ಬಳಿಕ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರು.

‘‘ಇಲ್ಲಿಗೆ ಬಂದವರು ಸುಮ್ಮನೆ ಹೋಗಿದ್ದಾರೆ. ಆದರೆ, ಮುಕ್ತ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ, ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧನಿದ್ದೇನೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News