ಕಾಶ್ಮೀರ ಸಂಬಂಧಿ ಉದ್ವಿಗ್ನತೆಯನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಿ: ಇಮ್ರಾನ್ ಖಾನ್‌ಗೆ ಟ್ರಂಪ್ ಸಲಹೆ

Update: 2019-08-17 15:08 GMT

ವಾಶಿಂಗ್ಟನ್, ಆ. 17: ಜಮ್ಮು ಮತ್ತು ಕಾಶ್ಮೀರ ಕುರಿತ ವಿವಾದವನ್ನು ಭಾರತ ಮತ್ತು ಪಾಕಿಸ್ತಾನಗಳು ದ್ವಿಪಕ್ಷೀಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಹೇಳಿದ್ದಾರೆ.

ಫೋನ್ ಮೂಲಕ ಶುಕ್ರವಾರ ನಡೆದ ಮಾತುಕತೆಯ ವೇಳೆ ಈ ವಿಷಯವನ್ನು ಟ್ರಂಪ್ ಸ್ಪಷ್ಟಪಡಿಸಿದರು. ಉಭಯ ದೇಶಗಳ ನಡುವಿನ ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವ ಈ ಹಿಂದಿನ ಕೊಡುಗೆಯಿಂದ ಟ್ರಂಪ್ ಈ ಬಾರಿ ಹಿಂದೆ ಸರಿದಿರುವುದು ಗಮನಾರ್ಹವಾಗಿದೆ.

ಇಮ್ರಾನ್ ಖಾನ್ ಜುಲೈ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಕೊಡುಗೆಯನ್ನು ಟ್ರಂಪ್ ನೀಡಿದ್ದರು. ಈ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕೂಡ ಕೋರಿದ್ದರು ಎಂಬುದಾಗಿಯೂ ಅವರು ಈ ಸಂದರ್ಭದಲ್ಲಿ ಹೇಳಿದ್ದರು. ಆದರೆ, ಇದನ್ನು ಭಾರತ ನಿರಾಕರಿಸಿತ್ತು.

‘‘ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಗೆ ಸಂಬಂಧಿಸಿ ದ್ವಿಪಕ್ಷೀಯ ಮಾತುಕತೆಯ ಮೂಲಕ ಭಾರತ ಮತ್ತು ಪಾಕಿಸ್ತಾನಗಳು ತಮ್ಮ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳುವ ಅಗತ್ಯದ ಬಗ್ಗೆ ಟ್ರಂಪ್ ಮಾತನಾಡಿದರು’’ ಎಂದು ಶ್ವೇತಭವನದ ವಕ್ತಾರ ಹೋಗನ್ ಗಿಡ್ಲೇ ಹೇಳಿಕೆಯೊಂದರಲ್ಲಿ ತಿಳಿಸಿದರು.

ಅಮೆರಿಕ ಮತ್ತು ಪಾಕಿಸ್ತಾನಗಳು ತಮ್ಮ ನಡುವಿನ ಸಂಬಂಧ ವೃದ್ಧಿಯನ್ನು ಹೇಗೆ ಮುಂದುವರಿಸಬಹುದು ಹಾಗೂ ಇತ್ತೀಚೆಗೆ ಶ್ವೇತಭವನದಲ್ಲಿ ಉಭಯ ನಾಯಕರ ನಡುವಿನ ಭೇಟಿಯಿಂದ ಸೃಷ್ಟಿಯಾಗಿರುವ ವೇಗೋತ್ಕರ್ಷವನ್ನು ಹೇಗೆ ಮುಂದಿನ ಹಂತಕ್ಕೆ ಒಯ್ಯಬಹುದು ಎಂಬ ಬಗ್ಗೆ ಉಭಯ ನಾಯಕರು ಫೋನ್‌ನಲ್ಲಿ ಮಾತುಕತೆ ನಡೆಸಿದರು ಎಂದು ವಕ್ತಾರ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News