ಪಶ್ಚಿಮ ದಂಡೆ ಭೇಟಿಯನ್ನು ರದ್ದುಪಡಿಸಿದ ರಶೀದಾ ತ್ಲೈಬ್

Update: 2019-08-17 15:16 GMT

ವಾಶಿಂಗ್ಟನ್, ಆ. 17: ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಅಜ್ಜಿಯನ್ನು ನೋಡಲು ‘ಮಾನವೀಯ ನೆಲೆಯಲ್ಲಿ’ ಇಸ್ರೇಲ್ ಅನುಮತಿ ನೀಡಿರುವ ಹೊರತಾಗಿಯೂ, ನಾನು ಅಜ್ಜಿಯನ್ನು ಭೇಟಿ ಮಾಡಲು ಹೋಗುವುದಿಲ್ಲ ಎಂದು ಅಮೆರಿಕದ ಡೆಮಾಕ್ರಟಿಕ್ ಪಕ್ಷದ ಸಂಸದೆ ರಶೀದಾ ತ್ಲೈಬ್ ಶುಕ್ರವಾರ ಹೇಳಿದ್ದಾರೆ.

ಈ ಭೇಟಿಗಾಗಿ ಇಸ್ರೇಲ್ ವಿಧಿಸಿರುವ ‘ದಮನಕಾರಿ’ ಶರತ್ತುಗಳು ನನ್ನನ್ನು ಅವಮಾನಿಸುವ ಉದ್ದೇಶವನ್ನು ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಸ್ರೇಲನ್ನು ಬಹಿಷ್ಕರಿಸಬೇಕೆಂದು ಕರೆ ನೀಡುವ ಅಭಿಯಾನಕ್ಕೆ ರಶೀದಾ ಮತ್ತು ಇನ್ನೊಬ್ಬ ಡೆಮಾಕ್ರಟಿಕ್ ಪಕ್ಷದ ಸಂಸದೆ ಇಲ್ಹಾನ್ ಉಮರ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ, ಜೆರುಸಲೇಮ್ ಮತ್ತು ಪಶ್ಚಿಮ ದಂಡೆಗೆ ಅವರು ನೀಡಲು ಉದ್ದೇಶಿಸಿರುವ ಭೇಟಿಯನ್ನು ಇಸ್ರೇಲ್ ರದ್ದುಪಡಿಸಿದೆ.

ಆದರೆ, ಫೆಲೆಸ್ತೀನ್ ಮೂಲದವರಾಗಿರುವ ರಶೀದಾ ಮಾನವೀಯ ನೆಲೆಯಲ್ಲಿ ಪಶ್ಚಿಮ ದಂಡೆಯಲ್ಲಿರುವ ತನ್ನ ಅಜ್ಜಿಯನ್ನು ನೋಡಬಹುದು ಎಂದು ಇಸ್ರೇಲ್ ಶುಕ್ರವಾರ ಹೇಳಿದೆ. ಅದೇ ವೇಳೆ, ರಶೀದಾ ಸಹಿ ಹಾಕಿದ್ದಾರೆನ್ನಲಾದ ಪತ್ರವೊಂದನ್ನು ಇಸ್ರೇಲ್ ಆಂತರಿಕ ಸಚಿವಾಲಯ ಬಿಡುಗಡೆ ಮಾಡಿದೆ. ನನ್ನ ಭೇಟಿಯ ವೇಳೆ ಇಸ್ರೇಲ್ ಬಹಿಷ್ಕಾರಕ್ಕೆ ಸಂಬಂಧಿಸಿ ಏನೂ ಮಾತನಾಡುವುದಿಲ್ಲ ಎಂಬ ಭರವಸೆಯನ್ನು ಪತ್ರದಲ್ಲಿ ರಶೀದಾ ನೀಡಿದ್ದಾರೆನ್ನಲಾಗಿದೆ.

‘‘ಈ ದಮನಕಾರಿ ಶರತ್ತುಗಳ ಅಡಿಯಲ್ಲಿ ನನ್ನ ಅಜ್ಜಿಯನ್ನು ಭೇಟಿ ಮಾಡುವುದೆಂದರೆ ನನ್ನನ್ನು ನಾನೇ ಅವಮಾನ ಮಾಡಿದಂತೆ ಹಾಗೂ ಅದು ಅಜ್ಜಿಯ ಹೃದಯವನ್ನು ಒಡೆಯುತ್ತದೆ’’ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News