ರೊಹಿಂಗ್ಯಾ ದಮನ ಕಾರ್ಯಾಚರಣೆಗೆ ಎರಡು ವರ್ಷ: ಬಾಂಗ್ಲಾದೇಶದ ಶಿಬಿರದಲ್ಲಿ ಬೃಹತ್ ಸಮಾವೇಶ

Update: 2019-08-26 17:46 GMT

ಕುಟುಪಲೊಂಗ್ (ಬಾಂಗ್ಲಾದೇಶ), ಆ. 26: ಮ್ಯಾನ್ಮಾರ್ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದ ಎರಡನೇ ವಾರ್ಷಿಕ ದಿನದ ಸಂದರ್ಭದಲ್ಲಿ ರವಿವಾರ ರೊಹಿಂಗ್ಯ ನಿರಾಶ್ರಿತರು ಬಾಂಗ್ಲಾದೇಶದ ಶಿಬಿರವೊಂದರಲ್ಲಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದರು.

2017ರ ಆಗಸ್ಟ್‌ನಲ್ಲಿ ಆರಂಭಗೊಂಡ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7.40 ಲಕ್ಷ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಬಾಂಗ್ಲಾದೇಶದ ಆಗ್ನೇಯ ಗಡಿ ಜಿಲ್ಲೆ ಕಾಕ್ಸ್ ಬಝಾರ್‌ನಲ್ಲಿರುವ ಮೂರು ಡಝನ್ ಶಿಬಿರಗಳಲ್ಲಿ ಒಟ್ಟು ಸುಮಾರು 10 ಲಕ್ಷ ರೊಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಇದರಲ್ಲಿ ಹಿಂದೆ ನಡೆದ ದಮನ ಕಾರ್ಯಾಚರಣೆಗಳ ವೇಳೆ ಬಾಂಗ್ಲಾದೇಶಕ್ಕೆ ಪಲಾಯನಗೈದವರೂ ಇದ್ದಾರೆ.

ರವಿವಾರ ಮಕ್ಕಳು, ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸುಮಾರು ಎರಡು ಲಕ್ಷ ರೊಹಿಂಗ್ಯಾ ನಿರಾಶ್ರಿತರು, ‘ದೇವರು ದೊಡ್ಡವನು’, ‘ರೊಹಿಂಗ್ಯಾ ಚಿರಾಯುವಾಗು’ ಎಂಬ ಘೋಷಣೆಗಳನ್ನು ಕೂಗಿದರು. ಇದು ‘ಜನಾಂಗೀಯ ಹತ್ಯೆ’ ದಿನವಾಗಿದೆ ಎಂದು ಅವರು ಬಣ್ಣಿಸಿದರು.

‘ರೊಹಿಂಗ್ಯಾರ ಕೂಗನ್ನು ಜಗತ್ತು ಆಲಿಸುತ್ತಿಲ್ಲ’ ಎಂಬ ಜನಪ್ರಿಯ ಹಾಡೊಂದನ್ನು ಅವರು ಈ ಸಂದರ್ಭದಲ್ಲಿ ಹಾಡಿದರು.

‘‘ನನ್ನ ಇಬ್ಬರು ಪುತ್ರರ ಹತ್ಯೆಗೆ ನ್ಯಾಯ ಕೇಳುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನನ್ನ ಕೊನೆಯ ಉಸಿರಿನವರೆಗೂ ನ್ಯಾಯಕ್ಕಾಗಿ ಹೋರಾಡುವುದನ್ನು ನಾನು ಮುಂದುವರಿಸುತ್ತೇನೆ’’ ಎಂದು 50 ವರ್ಷದ ಮಹಿಳೆ ತಯಾಬಾ ಖಾತುನ್ ಕಣ್ಣಲ್ಲಿ ನೀರು ಹರಿಸುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News