ಇರಾನ್ ಅಧ್ಯಕ್ಷರ ಜೊತೆ ಮಾತುಕತೆಗೆ ಸಿದ್ಧ: ಟ್ರಂಪ್

Update: 2019-08-27 14:29 GMT

ಬಿಯಾರಿಟ್ಝ್ (ಫ್ರಾನ್ಸ್), ಆ. 27: ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಜಿ7 ಶೃಂಗ ಸಭೆಯಲ್ಲಿ ಮಾತುಕತೆ ನಡೆದಿದ್ದು, ಮುಂದಿನ ಕೆಲವು ವಾರಗಳಲ್ಲಿ ಇರಾನ್ ಅಧ್ಯಕ್ಷ ಹಸನ್ ರೂಹಾನಿಯನ್ನು ಭೇಟಿಯಾಗಲು ನಾನು ಸಿದ್ಧನಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರ ಆಹ್ವಾನವನ್ನು ಮನ್ನಿಸಿ, ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಇಲ್ಲಿ ನಡೆದ ಜಿ7 ಶೃಂಗ ಸಮ್ಮೇಳನದ ನೇಪಥ್ಯದಲ್ಲಿ ರವಿವಾರ ಕಾಣಿಸಿಕೊಂಡಿದ್ದರು.

 ವ್ಯಾಪಕ ರಾಜತಾಂತ್ರಿಕತೆ ಮತ್ತು ಸಮಲೋಚನೆಗಳ ಮೂಲಕ ಮುಂದಿನ ಕೆಲವು ವಾರಗಳಲ್ಲಿ ಟ್ರಂಪ್ ಮತ್ತು ರೂಹಾನಿ ನಡುವೆ ಸಭೆ ನಡೆಯುವುದಕ್ಕೆ ಪೂರಕವಾದ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಮ್ಯಾಕ್ರೋನ್ ಹೇಳಿದರು.

‘‘ಸನ್ನಿವೇಶಗಳು ಪೂರಕವಾದರೆ, ನಾನು ಅದಕ್ಕೆ ಖಂಡಿತವಾಗಿಯೂ ಒಪ್ಪುತ್ತೇನೆ’’ ಎಂದು ಮ್ಯಾಕ್ರೋನ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಹೇಳಿದರು.

‘‘ನನ್ನನ್ನು ಭೇಟಿಯಾಗಲು ಇರಾನ್ ಅಧ್ಯಕ್ಷರೂ ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಈ ಪರಿಸ್ಥಿತಿಯನ್ನು ನಿವಾರಿಸಲು ಇರಾನ್ ಬಯಸುತ್ತದೆ ಎಂದು ನಾನು ನಂಬುತ್ತೇನೆ’’ ಎಂದು ಟ್ರಂಪ್ ನುಡಿದರು.

ಇರಾನ್‌ನ ಪರಮಾಣು ಕಾರ್ಯಕ್ರಮದ ಬೆನ್ನೆಲುಬು ಮುರಿಯುವ ಉದ್ದೇಶದಿಂದ ಅಮೆರಿಕವು ಆ ದೇಶದ ಮೇಲೆ ಗರಿಷ್ಠ ಒತ್ತಡವನ್ನು ಹೇರುತ್ತಾ ಬಂದಿದೆ. ಇದರ ಭಾಗವಾಗಿ, ಅದು ಇರಾನ್ ಮೇಲೆ ಕಠಿನ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ, ಕೊಲ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.

► ದಿಗ್ಬಂಧನ ಮೊದಲು ತೆರವುಗೊಳಿಸಿ: ಹಸನ್ ರೂಹಾನಿ

ಮಾತುಕತೆಗೆ ಪೂರ್ವಭಾವಿಯಾಗಿ, ಇರಾನ್ ವಿರುದ್ಧದ ಎಲ್ಲ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕ ತೆರವುಗೊಳಿಸಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮಂಗಳವಾರ ಹೇಳಿದ್ದಾರೆ.

ಇರಾನ್ ಅಧ್ಯಕ್ಷರ ಜೊತೆ ಮಾತುಕತೆಗೆ ನಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಒಂದು ದಿನದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘‘ದಿಗ್ಬಂಧನಗಳನ್ನು ತೆರವುಗೊಳಿಸುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ. ಇರಾನ್ ದೇಶದ ವಿರುದ್ಧ ನೀವು ವಿಧಿಸಿರುವ ಎಲ್ಲ ಅಕ್ರಮ, ಅನ್ಯಾಯದ ಮತ್ತು ತಪ್ಪು ದಿಗ್ಬಂಧನಗಳನ್ನು ಹಿಂದಕ್ಕೆ ಪಡೆಯಬೇಕು’’ ಎಂದು ಸರಕಾರಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ರೂಹಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News