​ಟೆಕ್ಸಸ್‌ನಲ್ಲಿ ಗುಂಡಿನ ದಾಳಿ: 5 ಮಂದಿ ಬಲಿ

Update: 2019-09-01 04:06 GMT

ಟೆಕ್ಸಸ್: ಬಂದೂಕುದಾರಿಯೊಬ್ಬ ಪಶ್ಚಿಮ ಟೆಕ್ಸಸ್‌ನ ಒಡೆಸ್ಸಾ ಮತ್ತು ಮಿಡ್‌ಲ್ಯಾಂಡ್‌ನಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟು, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ ಮೂವರು ಪೊಲೀಸರಿಗೂ ಗುಂಡು ತಗುಲಿದೆ ಎಂದು ಒಡೆಸ್ಸಾ ಪೊಲೀಸ್ ಮುಖ್ಯಸ್ಥ ಮೈಕೆಲ್ ಗೆರ್ಕ್ ಹೇಳಿದ್ದಾರೆ.

ದಾಳಿಕೋರ 30 ವರ್ಷದ ಬಿಳಿ ವ್ಯಕ್ತಿ ಎನ್ನಲಾಗಿದ್ದು, ಸಿನರ್ಸಿ ಚಿತ್ರಮಂದಿರದಲ್ಲಿ ದಾಳಿಕೋರನನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಹಂತಕ ಅಂಚೆ ಸೇವೆಯ ವಾಹನವನ್ನು ಹೈಜಾಕ್ ಮಾಡಿ ಚಲಾಯಿಸಿಕೊಂಡು ಬಂದು ಒಡೆಸ್ಸಾ ಮತ್ತು ಮಿಡ್‌ಲ್ಯಾಂಡ್‌ನಲ್ಲಿ ಬೇಕಾಬಿಟ್ಟಿ ಗುಂಡಿನ ದಾಳಿ ಆರಂಭಿಸಿದ ಎಂದು ಅವರು ವಿವರಿಸಿದ್ದಾರೆ.

ಟೆಕ್ಸಸ್ ಸಾರ್ವಜನಿಕ ಸುರಕ್ಷಾ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, ಗುಂಡಿನ ದಾಳಿ ನಡೆಯುತ್ತಿದ್ದ ಸಂದರ್ಭ ಹೆದ್ದಾರಿಯನ್ನು ಬಳಸದಂತೆ ಸೂಚಿಸಿತ್ತು. ಟೆಕ್ಸಸ್‌ನ ಗಡಿ ನಗರ ಎಲ್ ಪಸೊದಲ್ಲಿ ವಾಲ್‌ಮಾರ್ಟ್ ಮಳಿಗೆಯಲ್ಲಿ ಇತ್ತೀಚೆಗೆ ನಡೆದ ಇಂಥದ್ದೇ ದಾಳಿಯಲ್ಲಿ 22 ಮಂದಿ ಬಲಿಯಾಗಿದ್ದರು. ಇಂಥ ದಾಳಿಗಳನ್ನು ತಡೆಯಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಟೆಕ್ಸಸ್ ಗವರ್ನರ್ ಗ್ರೆಗ್ ಅಬೋಟ್ ಅವರು ಇತ್ತೀಚೆಗೆ ಎರಡು ಬಾರಿ ಜನಪ್ರತಿನಿಧಿಗಳ ಸಭೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News