ಅಮೆರಿಕ: ಶೂಟೌಟ್‌ಗೆ ಕನಿಷ್ಠ 5 ಬಲಿ 20 ಮಂದಿಗೆ ಗಾಯ; ಗುಂಡಿನ ಚಕಮಕಿಯಲ್ಲಿ ಹಂತಕನ ಹತ್ಯೆ

Update: 2019-09-01 16:48 GMT

 ಆಸ್ಟಿನ್ (ಟೆಕ್ಸಾಸ್),ಸೆ.1: ಅಮೆರಿಕದಲ್ಲಿ ಶೂಟೌಟ್ ಮರುಕಳಿಸಿದ್ದು, ತನ್ನ ವಾಹನವನ್ನು ಸಂಚಾರಿ ಪೊಲೀಸರು ತಡೆದ ಬಳಿಕ ವ್ಯಕ್ತಿಯೊಬ್ಬ ಮನಬಂದಂತೆ ಗುಂಡುಹಾರಿಸಿ ಐವರನ್ನು ಹತ್ಯೆಗೈದ ಘಟನೆ ಪಶ್ಚಿಮ ಟೆಕ್ಸಾಸ್‌ನಲ್ಲಿ ಶನಿವಾರ ನಡೆದಿದೆ. ಘಟನೆಯಲ್ಲಿ ಇತರ 20 ಮಂದಿಗೆ ಗುಂಡೇಟಿನ ಗಾಯಗಳಾಗಿವೆ. ಆನಂತರ ಪೊಲೀಸರು ಹಂತಕನನ್ನು ಚಿತ್ರಮಂದಿರವೊಂದರ ಹೊರಭಾಗದಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ. ದುಷ್ಕರ್ಮಿಯ ಗುಂಡಿಗೆ ಬಲಿಯಾದವರಲ್ಲಿ ಮೂವರು ಪೊಲೀಸ್ ಅಧಿಕಾರಿಗಳೂ ಸೇರಿದ್ದಾರೆ.

     ಟೆಕ್ಸಾಸ್ ಆಯಿಲ್ ಕಂಟ್ರಿ ಪ್ರದೇಶದಲ್ಲಿರುವ ಅಂತರ್‌ರಾಜ್ಯ ಸಾರಿಗೆ ನಿಲುಗಡೆ ಕೇಂದ್ರದ ಬಳಿಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದುಷ್ಕರ್ಮಿಯು, ಎಡಕ್ಕೆ ತಿರುಗುವ ಸಿಗ್ನಲ್‌ನ್ನು ಪ್ರದರ್ಶಿಸದೆ ಇದ್ದುದಕ್ಕಾಗಿ ಸಂಚಾರಿ ಪೊಲೀಸರು ಆತನನ್ನು ತಡೆದಿದ್ದರು. ಆಗ ಆತ ತನ್ನಲ್ಲಿದ್ದ ಬಂದೂಕಿನಿಂದ ಯದ್ವಾತದ್ವಾ ಗುಂಡುಹಾರಿಸಿದ್ದಾನೆ. ಆನಂತರ ಅಂಚೆ ಸೇವೆಯ ವಾಹನವನ್ನು ಅಪಹರಿಸಿ ಸ್ಥಳದಿಂದಾಗಿ ಪರಾರಿಯಾಗಿದ್ದಾನೆ. ಬಳಿಕ ಆತ ಟೆಕ್ಸಾಸ್‌ನ ಮಿಡ್‌ಲ್ಯಾಂಡ್ ಹಾಗೂ ಅಲ್ಲಿಂದ 20 ಮೈಲು ದೂರದಲ್ಲಿರುವ ಒಡೆಸ್ಸಾದಲ್ಲೂ ಚಿತ್ರಮಂದಿರವೊಂದರ ಬಳಿ ಮನಬಂದಂತೆ ಗುಂಡುಹಾರಿಸಿ, ಹಲವರನ್ನು ಗಾಯಗೊಳಿಸಿದ್ದಾನೆ.

ಗುಂಡು ಹಾರಾಟಕ್ಕೆ ಬೆದರಿ, ಚಿತ್ರಮಂದಿರವೊಂದದಿಂದ ನೂರಾರು ಮಂದಿ ಹೊರಗೋಡಿ ಬರುತ್ತಿರುವ ವಿಡಿಯೋ ದೃಶ್ಯಗಳು ಮೊಬೈಲ್‌ಫೋನ್‌ಗಳಲ್ಲಿ ಹರಿದಾಡುತ್ತಿವೆ.

ಆನಂತರ ನಡೆದ ಗುಂಡಿನ ಚಕಮಕಿಯಲ್ಲಿ ಹಂತಕನನ್ನು ಚಿತ್ರಮಂದಿರದ ಬಳಿ ಹತ್ಯೆಗಯಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಟೆಕ್ಸಾಸ್‌ನ ಗಡಿಪಟ್ಟಣವಾದ ಎಲ್‌ಪಾಸೊದ ವಾಲ್‌ಮಾರ್ಟ್ ಶಾಪಿಂಗ್ ಮಳಿಗೆಯಲ್ಲಿ ಬಂದೂಕುಧಾರಿಯೊಬ್ಬ ಗುಂಡುಹಾರಿಸಿ 22 ಮಂದಿಯನ್ನು ಹತ್ಯೆಗೈದ ಘಟನೆ ನಡೆದ ಕೇವಲ ನಾಲ್ಕು ವಾರಗಳ ಬಳಿಕ ಈ ಹತ್ಯಾಕಾಂಡ ನಡೆದಿದೆ. ಪಶ್ಚಿಮ ಟೆಕ್ಸಾಸ್‌ನಲ್ಲಿ ಶನಿವಾರ ನಡೆದ ಗುಂಡುಹಾರಾಟದ ಘಟನೆಯೊಂದಿಗೆ, ಈ ವರ್ಷ ಅಮೆರಿಕದಲ್ಲಿ ಸಾಮೂಹಿಕ ಶೂಟೌಟ್ ಘಟನೆಗಳಿಗೆ ಬಲಿಯಾದವರ ಸಂಖ್ಯೆ 25ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News