ಪಾಕ್ ಸರಕಾರದಿಂದ ಮಿನರಲ್ ನೀರಿನ ಉತ್ಪಾದನೆ: 500 ಮಿ.ಲೀ. ಬಾಟಲಿ 1 ರೂ. ಬೆಲೆ

Update: 2019-09-01 16:57 GMT

ಇಸ್ಲಾಮಾಬಾದ್,ಸೆ.1: ಆಡಳಿತಾರೂಢ ತೆಹ್ರಿಕೆ ಇನ್ಸಾಫ್ ಸರಕಾರದ ಸರಳತೆಯ ಅಭಿಯಾನದ ಭಾಗವಾಗಿ, ವೆಚ್ಚ ಕಡಿತದ ಉದ್ದೇಶದಿಂದ ಪಾಕಿಸ್ತಾನವು ತನ್ನದೇ ಆದ ಮಿನರಲ್ ನೀರಿನ ಉತ್ಪಾದನೆಯನ್ನು ಆರಂಭಿಸಿದೆಯೆಂದು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫಾವದ್ ಚೌಧುರಿ ತಿಳಿಸಿದ್ದಾರೆ.

 ಸಂಶೋಧನೆ ಹಾಗೂ ಜಲಸಂಪನ್ಮೂಲಗಳಿಗಾಗಿನ ಪಾಕಿಸ್ತಾನದ ಸಂಶೋಧನಾ ಮಂಡಳಿಯು ‘ಸುರಕ್ಷಿತ ಕುಡಿಯುವ ನೀರು’ ಎಂಬ ಹೆಸರಿನ 500 ಮಿ.ಲೀ. ಮಿನರಲ್ ನೀರಿನ ಬಾಟಲಿಗಳ ಉತ್ಪಾದನೆಯನ್ನು ಆರಂಭಿಸಿದೆಯೆಂದು ಸಚಿವರು ಶನಿವಾರ ತಿಳಿಸಿದ್ದಾರೆ.

    ಮೊದಲ ಹಂತದಲ್ಲಿ ಮಿನರಲ್ ನೀರಿನ ಬಾಟಲಿಗಳನ್ನು ಪ್ರಧಾನಿಯವರ ಕಚೇರಿ, ಅಧ್ಯಕ್ಷೀಯ ಭವನ ಹಾಗೂ ಸಂಸತ್ ಭವನದಲ್ಲಿ ಬಳಸಲಾಗುವುದು. ಆನಂತರ ಅವುಗಳನ್ನು ಸಾರ್ವಜನಿಕರಿಗೂ ಲಭ್ಯವಾಗುವಂತೆ ಮಾಡಲಾಗುವುದೆಂದು ಅವರು ತಿಳಿಸಿದರು. 1 ರೂ. ಬೆಲೆಯ ನೀರಿನ ಬಾಟಲಿಗಳನ್ನು ನಾವು ಬಿಡುಗಡೆಗೊಳಿಸಿದ್ದೇವೆ ಹಾಗೂ ಇದು ಗುಣಮಟ್ಟದ ಕುಡಿಯುವ ನೀರಾಗಿದೆ’’ ಎಂದು ಸಚಿವರು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆಗೆ ಪ್ರತ್ಯೇಕವಾಗಿ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

   ದೇಶಾದ್ಯಂತ ಪಿಸಿಆರ್‌ಡಬ್ಲುಆರ್ ಸಂಸ್ಥೆಯು ನಡೆಸಿದ ಸಮೀಕ್ಷೆಯೊಂದರಲ್ಲಿ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿರುವ ಉಪ್ಪಿನ ಅಂಶದ ಪ್ರಮಾಣ ವನ್ನು ಪರೀಕ್ಷಿಸಲಾಗಿದೆಯೆಂದು ಅವರು ಹೇಳಿದ್ದಾರೆ. ಈ ಸಮೀಕ್ಷೆಯ ವರದಿಯ ಪ್ರಕಾರ ಉಪ್ಪಿನಾಂಶವಿರುವ ನೀರು ಇರುವ ತಹಶೀಲುಗಲ್ಲಿ ಖಾಸಗಿ ಕಂಪನಿಗಳ ನೆರವಿನೊಂದಿಗೆ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಬೇಕೆಂದು ಸಮೀಕ್ಷೆಯು ಶಿಫಾರಸು ಮಾಡಿದೆ.

  ಜನಸಾಮಾನ್ಯರಿಗೆ ಸುಲಭಕಂತುಗಳಲ್ಲಿ ಸಾಲಗಳನ್ನು ಒದಗಿಸಿ, ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಹಾಗೂ ದೇಶಾದ್ಯಂತ ಶುದ್ಧ ಕುಡಿಯುವ ನೀರು ದೊರೆಯುವಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News