ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆದ ಹಾಂಕಾಂಗ್ ನಾಯಕಿ

Update: 2019-09-04 15:03 GMT

ಹಾಂಕಾಂಗ್, ಸೆ. 4: ಹಲವು ತಿಂಗಳುಗಳ ಉಗ್ರ ಪ್ರತಿಭಟನೆಯ ಬಳಿಕ, ವಿವಾದಾಸ್ಪದ ಗಡಿಪಾರು ಮಸೂದೆಯನ್ನು ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಬುಧವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಟೆಲಿವಿಶನ್‌ನಲ್ಲಿ ಬುಧವಾರ ನಗರವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಯಾರೀ ಲ್ಯಾಮ್, ವಿವಾದಾಸ್ಪದ ಮಸೂದೆಯ ವಾಪಸಾತಿಯನ್ನು ಘೋಷಿಸಿದರು.

‘‘ನಿರಂತರ ನಡೆಯುತ್ತಿರುವ ಹಿಂಸೆಯು ನಮ್ಮ ಸಮಾಜದ, ಅದರಲ್ಲೂ ಮುಖ್ಯವಾಗಿ ಕಾನೂನಿನ ಆಡಳಿತದ ಪ್ರಧಾನ ತಳಹದಿಯನ್ನೇ ಬುಡಮೇಲು ಮಾಡುತ್ತಿದೆ’’ ಎಂದು ತನ್ನ ಭಾಷಣದಲ್ಲಿ ಅವರು ಹೇಳಿದರು.

ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆ ಎದುರಿಸಲು ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎನ್ನುವುದು ಪ್ರತಿಭಟನಕಾರರ ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಈ ಬೇಡಿಕೆಯನ್ನು ಮಾತೃಭೂಮಿ ಚೀನಾ ಬೆಂಬಲಿತ ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ನಿರಂತರವಾಗಿ ತಿರಸ್ಕರಿಸುತ್ತಾ ಬಂದರು. ಈ ಹಿನ್ನೆಲೆಯಲ್ಲಿ, ಹಲವು ಸಂದರ್ಭಗಳಲ್ಲಿ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದವು. ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಹಲವು ಬಾರಿ ಕಾಳಗ ನಡೆದಿತ್ತು.

1,000ಕ್ಕೂ ಅಧಿಕ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

‘‘ಸಾರ್ವಜನಿಕರ ಕಳವಳಗಳನ್ನು ಸಂಪೂರ್ಣವಾಗಿ ನಿವಾರಿಸುವ ಉದ್ದೇಶದಿಂದ ಗಡಿಪಾರು ಮಸೂದೆಯನ್ನು ಸರಕಾರವು ಔಪಚಾರಿಕವಾಗಿ ಹಿಂದಕ್ಕೆ ಪಡೆದುಕೊಳ್ಳಲಿದೆ’’ ಎಂದು ಲ್ಯಾಮ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News