ಬ್ರಿಟನ್ ಟ್ಯಾಂಕರ್‌ನ 7 ಸಿಬ್ಬಂದಿ ಬಿಡುಗಡೆಗೊಳಿಸಿದ ಇರಾನ್

Update: 2019-09-04 15:14 GMT

ದುಬೈ, ಸೆ. 4: ತನ್ನ ವಶದಲ್ಲಿರುವ ಬ್ರಿಟನ್‌ನ ತೈಲ ಟ್ಯಾಂಕರ್ ‘ಸ್ಟೆನಾ ಇಂಪೇರೊ’ದ ಏಳು ಸಿಬ್ಬಂದಿಯನ್ನು ಇರಾನ್ ಬಿಡುಗಡೆಗೊಳಿಸಲಿದೆ ಎಂದು ಇರಾನ್ ಸರಕಾರಿ ಟೆಲಿವಿಶನ್ ಬುಧವಾರ ವರದಿ ಮಾಡಿದೆ.

ಭಾರತೀಯ ನಾಗರಿಕರು ಸೇರಿದಂತೆ ಏಳು ಸಿಬ್ಬಂದಿಗೆ ಮಾನವೀಯ ನೆಲೆಯಲ್ಲಿ ಟ್ಯಾಂಕರ್‌ನಿಂದ ಹೊರಹೋಗಲು ಅನುಮತಿ ನೀಡಲಾಗಿದೆ ಹಾಗೂ ಅವರು ಶೀಘ್ರದಲ್ಲೇ ಇರಾನ್ ತೊರೆಯಬಹುದಾಗಿದೆ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ಟಿವಿಗೆ ಹೇಳಿದರು.

ಬ್ರಿಟನ್‌ನ ತೈಲ ಟ್ಯಾಂಕರನ್ನು ಜುಲೈ 19ರಂದು ಹೋರ್ಮುಝ್ ಜಲಸಂಧಿಯಲ್ಲಿ ಇರಾನ್ ತನ್ನ ವಶಕ್ಕೆ ತೆಗೆದುಕೊಂಡಿತ್ತು. ಹಡಗು ಅಂತರ್‌ರಾಷ್ಟ್ರೀಯ ಹಡಗುಯಾನ ನಿಯಮಾವಳಿಗಳನ್ನು ಉಲ್ಲಂಘಿಸಿತ್ತು ಎಂದು ಇರಾನ್ ಹೇಳಿದೆ.

ಇರಾನ್‌ನ ತೈಲ ಟ್ಯಾಂಕರೊಂದನ್ನು ಬಿಟನ್ ಆಡಳಿತಕ್ಕೆ ಒಳಪಟ್ಟ ಜಿಬ್ರಾಲ್ಟರ್ ವಶಪಡಿಸಿಕೊಂಡಿರುವುದಕ್ಕೆ ಪ್ರತೀಕಾರವಾಗಿ ಇರಾನ್ ಬ್ರಿಟನ್‌ನ ತೈಲ ಹಡಗನ್ನು ವಶಪಡಿಸಿಕೊಂಡಿತ್ತು ಎನ್ನಲಾಗಿದೆ.

ಇರಾನ್‌ನ ತೈಲ ಹಡಗನ್ನು ಜಿಬ್ರಾಲ್ಟರ್ ಈಗಾಗಲೇ ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News