ಪ್ರವಾಸ ಕಂಪೆನಿ ‘ಥಾಮಸ್ ಕುಕ್’ ದಿವಾಳಿ

Update: 2019-09-23 16:21 GMT

ಲಂಡನ್, ಸೆ. 23: ಸಾಲ ಪಡೆಯಲು ಅಂತಿಮ ವಿಫಲ ಯತ್ನಗಳನ್ನು ಮಾಡಿದ ಬಳಿಕ, ಬ್ರಿಟನ್‌ನ ಬೃಹತ್ ಪ್ರವಾಸೋದ್ಯಮ ಕಂಪೆನಿ ‘ಥಾಮಸ್ ಕುಕ್’ ಸೋಮವಾರ ದಿವಾಳಿಯಾಗಿರುವುದಾಗಿ ಘೋಷಿಸಿದೆ.

178 ವರ್ಷಗಳ ಇತಿಹಾಸ ಹೊಂದಿರುವ ಕಂಪೆನಿಯು, ದಿವಾಳಿಯನ್ನು ತಪ್ಪಿಸಲು ಖಾಸಗಿ ಹೂಡಿಕೆದಾರರಿಂದ 200 ಮಿಲಿಯ ಪೌಂಡ್ (ಸುಮಾರು 1,760 ಕೋಟಿ ರೂಪಾಯಿ) ಸಾಲಕ್ಕಾಗಿ ಪ್ರಯತ್ನಿಸುತ್ತಿತ್ತು.

‘‘ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಕಂಪೆನಿಯ ಅಧಿಕಾರಿಗಳು ಮತ್ತು ನೂತನ ಹೂಡಿಕೆದಾರರ ನಡುವಿನ ಮಾತುಕತೆಗಳು ಕರಾರು ಆಗಿ ಪರಿವರ್ತನೆಯಾಗಲಿಲ್ಲ’’ ಎಂದು ಹೇಳಿಕೆಯೊಂದರಲ್ಲಿ ‘ಥಾಮಸ್ ಕುಕ್’ ತಿಳಿಸಿದೆ.

ಕಂಪೆನಿಯ ಈ ಹಠಾತ್ ನಿರ್ಧಾರದ ಫಲವಾಗಿ ಜಗತ್ತಿನಾದ್ಯಂತ ಪ್ರವಾಸದಲ್ಲಿರುವ ಸುಮಾರು 6 ಲಕ್ಷ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದಾರೆ.

ಅದೂ ಅಲ್ಲದೆ, ಅದರಲ್ಲಿ ಕೆಲಸ ಮಾಡುತ್ತಿರುವ ಸುಮಾರು 22,000 ಉದ್ಯೋಗಿಗಳು ಅತಂತ್ರರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತೀವ್ರ ಆನ್‌ಲೈನ್ ಸ್ಪರ್ಧೆಯಿಂದಾಗಿ ಕಂಪೆನಿಯ ಸಂಕಷ್ಟವನ್ನೆದುರಿಸುತ್ತಿತ್ತು.

1841ರಲ್ಲಿ ಯಾನದ ಆರಂಭ

ಪೀಠೋಪಕರಣಗಳನ್ನು ತಯಾರಿಸುತ್ತಿದ್ದ ಥಾಮಸ್ ಕುಕ್ ಕಂಪೆನಿಯು 1841ರಲ್ಲಿ ಪ್ರವಾಸ ಸಂಸ್ಥೆಯನ್ನು ಆರಂಭಿಸಿತು. ಬ್ರಿಟಿಶ್ ನಗರಗಳ ನಡುವೆ ರೈಲಿನಲ್ಲಿ ಪ್ರವಾಸಕ್ಕಾಗಿ ಜನರನ್ನು ಸಾಗಿಸುವುದು ಅದರ ಗುರಿಯಾಗಿತ್ತು. ಬಳಿಕ ಅದು ಅಂತರ್‌ರಾಷ್ಟ್ರೀಯ ಕಂಪೆನಿಯಾಗಿ ಬೃಹತ್ ಪ್ರಮಾಣದಲ್ಲಿ ಬೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News