ಅಮೆರಿಕದ ಉಗ್ರ ನಿಗ್ರಹ ಹೋರಾಟದಲ್ಲಿ ಕೈಜೋಡಿಸಿರುವುದು ಪಾಕ್‌ನ ದೊಡ್ಡ ತಪ್ಪು: ಇಮ್ರಾನ್ ಖಾನ್

Update: 2019-09-24 16:35 GMT

ನ್ಯೂಯಾರ್ಕ್, ಸೆ. 24: 9/11ರ ದಾಳಿಯ ಬಳಿಕ, ಅಮೆರಿಕದ ಜೊತೆ ಕೈಜೋಡಿಸುವ ಮೂಲಕ ನನ್ನ ದೇಶ ‘ಅತ್ಯಂತ  ದೊಡ್ಡ ತಪ್ಪೊಂದನ್ನು’ ಮಾಡಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ಹೇಳಿದ್ದಾರೆ.

‘‘ತಮ್ಮಿಂದ ಈಡೇರಿಸಲು ಸಾಧ್ಯವಾಗದ ಭರವಸೆಗಳನ್ನು ಹಿಂದಿನ ಸರಕಾರಗಳು ನೀಡಬಾರದಾಗಿತ್ತು’’ ಎಂದು ಅಮೆರಿಕದ ಜೊತೆ ಕೈಜೋಡಿಸುವ ಮಾಜಿ ಅಧ್ಯಕ್ಷ ಜನರಲ್ ಫರ್ವೇಝ್ ಮುಶರ್ರಫ್‌ರ ನಿರ್ಧಾರದ ಬಗ್ಗ ಇಮ್ರಾನ್ ಹೇಳಿದರು.

ಅಫ್ಘಾನಿಸ್ತಾನದ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿದ್ದ ಮೂರು ದೇಶಗಳ ಪೈಕಿ ಪಾಕಿಸ್ತಾನವೂ ಒಂದಾಗಿತ್ತು. ಇತರ ಎರಡು ದೇಶಗಳೆಂದರೆ ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ಆದರೆ, 2001 ಸೆಪ್ಟಂಬರ್ 11ರಂದು (9/11) ಅಮೆರಿಕದ ಮೇಲೆ ಭಯೋತ್ಪಾದಕ ದಾಳಿ ನಡೆದ ಬಳಿಕ, ತಾಲಿಬಾನ್ ವಿರುದ್ಧದ ಅಮೆರಿಕ ಸೈನಿಕರ ಕಾರ್ಯಾಚರಣೆಗೆ ಪಾಕಿಸ್ತಾನ ಬೆಂಬಲ ನೀಡಿತು.

‘‘1980ರ ದಶಕದಲ್ಲಿ, ಸೋವಿಯತ್ ಯೂನಿಯನ್ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದಾಗ ಪಾಕಿಸ್ತಾನವು ಅಮೆರಿಕದ ನೆರವಿನಿಂದ ಸೋವಿಯತ್ ಪಡೆಗಳಿಗೆ ಪ್ರತಿರೋಧವನ್ನು ಸಂಘಟಿಸಿತು. ಸೋವಿಯತ್ ವಿರುದ್ಧ ಜಿಹಾದ್‌ಗಾಗಿ ಜಗತ್ತಿನ ಎಲ್ಲೆಡೆಯಿಂದ ಬಂಡುಕೋರರನ್ನು ಆಹ್ವಾನಿಸಲಾಯಿತು ಹಾಗೂ ಈ ಬಂಡುಕೋರರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಯ ತರಬೇತಿ ನೀಡಿತು’’ ಎಂದು ನ್ಯೂಯಾರ್ಕ್ ನಗರದಲ್ಲಿ ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ (ಸಿಎಫ್‌ಆರ್) ಎಂಬ ಸಂಘಟನೆಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘‘ಸೋವಿಯತ್ ವಿರುದ್ಧ ಹೋರಾಡುವುದಕ್ಕಾಗಿ ನಾವು ಈ ಬಂಡುಕೋರ ಗುಂಪುಗಳನ್ನು ಸೃಷಿಸಿದೆವು. ಈ ಜಿಹಾದಿಗಳು ಆಗ ಹೀರೊಗಳಾಗಿದ್ದರು. 1989ರಲ್ಲಿ ಸೋವಿಯತ್ ಜನರು ಅಫ್ಘಾನಿಸ್ತಾನದಿಂದ ಹೊರಹೋದರು ಹಾಗೂ ಅಮೆರಿಕವೂ ಅಫ್ಘಾನಿಸ್ತಾನದಿಂದ ಹೊರಹೋಯಿತು. ಆದರೆ, ಈ ಗುಂಪುಗಳು ನಮ್ಮಲ್ಲೇ ಉಳಿದವು’’ ಎಂದರು.

‘‘ನಂತರ 9/11 ಸಂಭವಿಸಿತು. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಅಮೆರಿಕದ ಜೊತೆ ಕೈಜೋಡಿಸಿತು. ಈಗ ನಾವು ಈ ಗುಂಪುಗಳನ್ನು ಭಯೋತ್ಪಾದಕರಂತೆ ಕಾಣಬೇಕಾಗಿತ್ತು. ವಿದೇಶಿ ಆಕ್ರಮಣದ ವಿರುದ್ಧ ಹೋರಾಡುವುದು ಜಿಹಾದ್ ಎಂಬುದನ್ನು ಅವರ ತಲೆಗೆ ತುಂಬಲಾಗಿತ್ತು. ಆದರೆ, ಈಗ ಅಫ್ಘಾನಿಸ್ತಾನಕ್ಕೆ ಅಮೆರಿಕ ಬಂದಾಗ, ಈ ಗುಂಪುಗಳು ಮಾಡುತ್ತಿರುವುದು ಭಯೋತ್ಪಾದನೆ ಎಂದು ಭಾವಿಸಬೇಕಾಗಿತ್ತು’’ ಎಂದು ಇಮ್ರಾನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News