ಸೌದಿ ದೊರೆಯ ಅಂಗರಕ್ಷಕ ಗುಂಡೇಟಿಗೆ ಬಲಿ

Update: 2019-09-30 03:56 GMT

ರಿಯಾದ್, ಸೆ.29: ಸೌದಿ ಅರೇಬಿಯದ ದೊರೆ ಸಲ್ಮಾನ್ ಅವರ ಖಾಸಗಿ ಅಂಗರಕ್ಷಕನೊಬ್ಬನನ್ನು ಆತನ ಸ್ನೇಹಿತನ ನಿವಾಸದಲ್ಲಿ ನಡೆದ ಘರ್ಷಣೆಯ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಹಾಗೂ ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಪೊಲೀಸರು ರವಿವಾರ ತಿಳಿಸಿದ್ದಾರೆ.

  ಸೌದಿ ದೊರೆ ಸಲ್ಮಾನ್‌ರ ಪಕ್ಕದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಅವರ ಅಂಗರಕ್ಷಕನಾದ ಜನರಲ್ ಅಬ್ದುಲ್‌ ಅಝೀಝ್ ಎಲ್-ಫಾಘಾಮ್, ಜಿದ್ದಾ ನಗರದಲ್ಲಿ ಶನಿವಾರ ಸಂಜೆ ನಡೆದ ಘರ್ಷಣೆಯೊಂದರಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ಸೌದಿ ಪ್ರೆಸ್ ಏಜಿನ್ಸಿ (ಎಸ್‌ಪಿಎ) ವರದಿ ಮಾಡಿದೆ.

ಜಿದ್ದಾದಲ್ಲಿರುವ ತನ್ನ ಸ್ನೇಹಿತನ ನಿವಾಸಕ್ಕೆ ಫಾಘಾಮ್ ಭೇಟಿ ನೀಡಿದ್ದಾಗ, ಅವರಿಗೆ ಪರಿಚಿತನಾದ ಮುಹಮ್ಮದ್ ಅಲ್-ಅಲಿ, ಆಗಮಿಸಿದ್ದ. ಈ ಸಂದರ್ಭದಲ್ಲಿ ಫಾಘಾಮ್ ಹಾಗೂ ಅಲಿ ನಡುವಿನ ಸಂಭಾಷಣೆ ಘರ್ಷಣೆಗೆ ತಿರುಗಿತು. ಆನಂತರ ಅಲಿ ಮನೆಯಿಂದ ನಿರ್ಗಮಿಸಿದನು. ಬಂದೂಕಿನೊಂದಿಗೆ ಮರಳಿ ಆಗಮಿಸಿದ ಆತ ಫಾಘಾಮ್‌ನೆಡೆಗೆ ಗುಂಡಿಕ್ಕಿದನು ಹಾಗೂ ಅಲ್ಲಿದ್ದ ಫಿಲಿಪ್ಪಿನೋ ಕಾರ್ಮಿಕ ಹಾಗೂ ಮನೆ ಮಾಲಕನ ಸಹೋದರನಿಗೂ ಗುಂಡಿಕ್ಕಿ ಗಾಯಗೊಳಿಸಿದನು.

ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ಘರ್ಷಣೆ ಭುಗಿಲೆದ್ದಿತ್ತೆಂದು ಅಲ್-ಅಕ್ಬರಿಯಾ ಟಿವಿವಾಹಿನಿ ವರದಿ ಮಾಡಿದೆ. ಆನಂತರ ಅಲಿ ಶರಣಾಗತನಾಗಲು ನಿರಾಕರಿಸಿದಾಗ ಪೊಲೀಸರು ಆತನೆಡೆಗೆ ಗುಂಡು ಹಾರಿಸಿದ್ದಾರೆ. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಅಲಿ ಸಾವನ್ನಪ್ಪಿದ್ದಾನೆ ಹಾಗೂ ಇತರ ಐವರು ಭದ್ರತಾ ಸಿಬ್ಬಂದಿಗೆ ಗುಂಡಿನ ಗಾಯಗಳಾಗಿವೆ.

ಗಂಭೀರ ಗಾಯಗೊಂಡ ಫಾಘಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಆಜ್ಞಾಪಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News