ಅಫ್ಘಾನ್ ಅಧ್ಯಕ್ಷೀಯ ಚುನಾವಣೆ; ಬಹುತೇಕ ಶಾಂತಿಯುತ ಮತದಾನ

Update: 2019-09-29 17:44 GMT

  ಕಾಬುಲ್,ಸೆ.29: ತಾಲಿಬಾನ್ ಬಂಡುಕೋರರ ದಾಳಿ ಭೀತಿ ನಡುವೆಯೇ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆಯು ಶನಿವಾರ ಬಹುತೇಕ ಶಾಂತಿಯುತವಾಗಿ ನಡೆಯಿತು.

ಕೆಲವು ಮತಗಟ್ಟೆಗಳಲ್ಲಿ ಬಂಡುಕೋರರು ಸಣ್ಣ ಪ್ರಮಾಣದ ದಾಳಿಗಳನ್ನು ನಡೆಸಿರುವ ಬಗ್ಗೆ ವರದಿಗಳು ಬಂದಿವೆ. ಆದರೆ ಮತದಾರರ ನೀರಸ ಪ್ರತಿಕ್ರಿಯೆ ಹಾಗೂ ಮತದಾನ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದು, ಅಸ್ಪಷ್ಟ ಚುನಾವಣಾ ಫಲಿತಾಂಶವು ದೇಶವನ್ನು ಇನ್ನಷ್ಟು ಅರಾಜಕತೆಯೆಡೆಗೆ ತಳ್ಳುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

ಅಫ್ಘಾನ್ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದ ಫಲಿತಾಂಶಗಳು ಅಕ್ಟೋಬರ್ 17ರ ವೇಳೆಗೆ ಮನ್ನ ಪ್ರಕಟವಾಗುವ ಸಾಧ್ಯತೆಗಳಿಲ್ಲ ಹಾಗೂ ನವೆಂಬರ್ 7ರ ಆನಂತರವಷ್ಟೇ ಅಂತಿಮ ಫಲಿತಾಂಶ ದೊರೆಯಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ. ಯಾವುದೇ ಅಭ್ಯರ್ಥಿಗೆ ಶೇ. 51ಕ್ಕಿಂತ ಹೆಚ್ಚು ಮತವನ್ನು ಪಡೆಯಲು ಸಾಧ್ಯವಾಗದೆ ಇದ್ದಲ್ಲಿ, ಎರಡನೇ ಸುತ್ತಿನ ಮತಏಣಿಕೆಲ್ಲಿ ಇಬ್ಬರು ಪ್ರಮುಖ ಅಭ್ಯರ್ಥಿಗಳ ಮತಗಳನ್ನು ಮಾತ್ರವೇ ಏಣಿಕೆ ಮಾಡಲಾಗುವುದು.

ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ತಾಲಿಬಾನ್ ಬಂಡುಕೋರರು ದೇಶಾದ್ಯಂತ ಹಲವಾರು ಮತಗಟ್ಟೆಗೆಳ ಮೇಲೆ ದಾಳಿ ನಡೆಸಿದ್ದಾರೆಂದು ಸುದ್ದಿಸಂಸ್ತೆಗಳು ವರದಿ ಮಾಡಿವೆ. ಆದರೆ ಮತಗಟ್ಟೆಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸಿದ್ದರಿಂದ ದೊಡ್ಡ ಪ್ರಮಾಣದ ಹಿಂಸಾಚಾರಗಳು ನಡೆಯುವುದನ್ನು ತಡೆಗಟ್ಟಲು ಸಾಧ್ಯವಾಗಿದೆಯೆಂದು ಭದ್ರತಾ ಮೂಲಗಳು ತಿಳಿಸಿವೆ.

ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಅಫ್ಘಾನ್ ಅಧ್ಯಕ್ಷೀಯ ಚುನಾವಣೆಯು ಅತ್ಯಂತ ಆರೋಗ್ಯಕರವಾದ ಹಾಗೂ ನ್ಯಾಯಯುತವಾದ ಚುನಾವಣೆಯಾಗಿದೆ ಎಂದು ಅಫ್ಘಾನಿಸ್ತಾನದ ಚುನಾವಣಾ ಆಯೋಗದ ವರಿಷ್ಠ ಹವಾ ಆಲಂ ನೂರಿಸ್ತಾನಿ ತಿಳಿಸಿದ್ದಾರೆ.

ಮತದಾನದ ವೇಳೆ ತಾಲಿಬಾನ್ ಬಂಡುಕೋರರು ನಡೆಸಿದ ದಾಳಿಗಳಲ್ಲಿ ಇಬ್ಬರು ಪೊಲೀಸರು ಹ3ಆಗೂ ಓರ್ವ ನಾಗರಿಕ ಸಾವನ್ನಪ್ಪಿದ್ದು, 37 ಮಂದಿ ಗಾಯಗೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ತಾಲಿಬಾನ್ ಆಳ್ವಿಕೆ ಪತನಗೊಂಡ ಬಳಿಕ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ನಾಲ್ಕನೆ ಅಧ್ಯಕ್ಷೀಯ ಚುನಾವಣೆ ಇದಾಗಿದೆ.

 ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 12 ಅಧಿಕ ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ ಮಾಜಿ ಉಪಾಧ್ಯಕ್ಷರಾದ ಅಬ್ದುಲ್ಲಾ ಅಬ್ದುಲ್ಲಾ ಮುಂಚೂಣಿಯಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News