ಕಾಶ್ಮೀರದಲ್ಲಿ ಅಭಿವೃದ್ಧಿ ಆರಂಭಗೊಂಡರೆ 70 ವರ್ಷಗಳ ಪಾಕ್ ಪಿತೂರಿಗೆ ಕೊನೆ: ಅಮೆರಿಕದಲ್ಲಿ ವಿದೇಶ ಸಚಿವ ಜೈಶಂಕರ್

Update: 2019-10-02 16:27 GMT

ವಾಶಿಂಗ್ಟನ್, ಅ. 2: ಜಮ್ಮು ಮತ್ತು ಕಾಶ್ಮೀರದಲ್ಲಿ ಒಮ್ಮೆ ಅಭಿವೃದ್ಧಿ ಪರ್ವ ಆರಂಭಗೊಂಡ ಬಳಿಕ, ಕಳೆದ 70 ವರ್ಷಗಳಲ್ಲಿ ರಾಜ್ಯದ ವಿರುದ್ಧ ಪಾಕಿಸ್ತಾನ ಮಾಡಿರುವ ಎಲ್ಲ ಪಿತೂರಿಗಳು ನಿಂತುಹೋಗುತ್ತವೆ ಎಂದು ಭಾರತದ ವಿದೇಶ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಅಮೆರಿಕದ ಖ್ಯಾತ ಸಂಘಟನೆ ‘ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟಡೀಸ್, ವಾಶಿಂಗ್ಟನ್‌ನಲ್ಲಿ ಮಂಗಳವಾರ ಏರ್ಪಡಿಸಿದ ಸಮಾರಂಭವೊಂದರಲ್ಲಿ ಅವರು ಮಾತನಾಡುತ್ತಿದ್ದರು.

 ಜನರ ಮನಸ್ಸು ಕೆಡಿಸಲು ಮತ್ತು ಭಾರತ ವಿರೋಧಿ ಶಕ್ತಿಗಳನ್ನು ಒಟ್ಟುಗೂಡಿಸಲು ಇಂಟರ್‌ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಲು ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ಜಾಲವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

ರಾಜ್ಯವು ಅಭಿವೃದ್ಧಿ ಘಟ್ಟಕ್ಕೆ ಪರಿವರ್ತನೆಯಾಗುವ ಸಮಯದಲ್ಲಿ ಯಾವುದೇ ಹಿಂಸಾಚಾರ ಮತ್ತು ಪ್ರಾಣಹಾನಿಯನ್ನು ತಪ್ಪಿಸುವುದು ಕೂಡ ಮೊಬೈಲ್ ಜಾಲ ಸ್ಥಗಿತದ ಹಿಂದಿನ ಉದ್ದೇಶವಾಗಿದೆ ಎಂದರು.

‘‘ಅಲ್ಲಿ 70 ವರ್ಷಗಳಿಂದ ಕಟ್ಟಿ ಬೆಳೆಸಲಾದ ಸ್ಥಾಪಿತ ಹಿತಾಸಕ್ತಿಗಳಿವೆ. ಅಲ್ಲಿ ಸ್ಥಳೀಯ ಸ್ಥಾಪಿತ ಹಿತಾಸಕ್ತಿಗಳಿವೆ. ಅಲ್ಲಿ ಗಡಿಯಾಚೆಗಿನ ಸ್ಥಾಪಿತ ಹಿತಾಸಕ್ತಿಗಳಿವೆ’’ ಎಂದು ಜೈಶಂಕರ್ ಹೇಳಿದರು.

‘‘ಯಾವುದೇ ವಿಷಯದ ಯಥಾಸ್ಥಿತಿಯು ಗಣನೀಯ ರೀತಿಯಲ್ಲಿ ಬದಲಾದಾಗ, ಅಲ್ಲಿ ಪ್ರತಿಕ್ರಿಯೆಗಳು ಏರ್ಪಡುತ್ತವೆ ಹಾಗೂ ಸಂಕ್ರಮಣ ಅವಧಿಯ ಅಪಾಯಗಳು ಇರುತ್ತವೆ’’ ಎಂದು ಭಾರತೀಯ ವಿದೇಶ ಸಚಿವರು ಅಭಿಪ್ರಾಯಪಟ್ಟರು.

‘‘ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಮುಂದುವರಿಯುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾದರೆ, ಕಳೆದ 70 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನೀಯರು ರೂಪಿಸಿಕೊಂಡು ಬಂದಿರುವ ಪಿತೂರಿಗಳು ಕೊನೆಗೊಳ್ಳುತ್ತವೆ’’ ಎಂದು ಜೈಶಂಕರ್ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News