ಏಶ್ಯದ ಅಡುಗೆ ಮನೆಗಳಲ್ಲಿ ಹಾಹಾಕಾರ!

Update: 2019-10-02 16:32 GMT

  ಕಠ್ಮಂಡು, ಅ. 2: ಕಠ್ಮಂಡುನಿಂದ ಹಿಡಿದು ಕೊಲಂಬೊವರೆಗೆ ಅಡುಗೆಮನೆಯಲ್ಲಿ ಹಾಹಾಕಾರ! ಕಾರಣ, ಈರುಳ್ಳಿ ಬೆಲೆಗಳು ಗಗನಕ್ಕೆ!

ಜಗತ್ತಿನ ಅತಿ ದೊಡ್ಡ ಈರುಳ್ಳಿ ಮಾರಾಟಗಾರನಾಗಿರುವ ಭಾರತವು ರಫ್ತನ್ನು ನಿಷೇಧಿಸಿರುವುದು ಈ ಬೆಳವಣಿಗೆಗಳಿಗೆ ಕಾರಣ. ಭಾರತದ ಮುಂಗಾರು ವಿಸ್ತರಣೆಗೊಂಡು ಬಿರುಸಿನ ಮಳೆ ಇನ್ನೂ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೊಯ್ಲು ವಿಳಂಬವಾಗಿದೆ. ಹಾಗಾಗಿ ಪೂರೈಕೆ ಕುಂಠಿತವಾಗಿದೆ.

‘‘ಇದು ಅತ್ಯಂತ ಬಿರುಸಿನ ಬೆಲೆಯೇರಿಕೆ’’ ಎಂದು ಕಠ್ಮಂಡು ಮಾರುಕಟ್ಟೆಯಲ್ಲಿ ತರಕಾರಿ ಖರೀದಿಗೆ ಬಂದಿರುವ ಗೃಹಿಣಿ ಸೀಮಾ ಪೋಖರೆಲ್ ಹೇಳುತ್ತಾರೆ. ‘‘ಕಳೆದ ತಿಂಗಳಿನಲ್ಲೇ ಈರುಳ್ಳಿ ಬೆಲೆಯು ದುಪ್ಪಟ್ಟಿಗಿಂತಲೂ ಅಧಿಕವಾಗಿದೆ’’ ಎಂದು ಅವರು ಹೇಳಿದರು.

 ಪಾಕಿಸ್ತಾನದ ಕೋಳಿ ಸಾರಾಗಲಿ, ಬಾಂಗ್ಲಾದೇಶದ ಬಿರಿಯಾನಿಯಾಗಲಿ ಅಥವಾ ಭಾರತದ ಸಾಂಬಾರ್ ಆಗಲಿ, ಏಶ್ಯದ ಜನರು ಅಡುಗೆಗಾಗಿ ಭಾರತೀಯ ಈರುಳ್ಳಿಯನ್ನೇ ಅವಲಂಬಿಸಿದ್ದಾರೆ. ಚೀನಾ ಮತ್ತು ಈಜಿಪ್ಟ್‌ನಿಂದ ಬರುವ ಈರುಳ್ಳಿಗೆ ಹೋಲಿಸಿದರೆ ಭಾರತದ ಈರುಳ್ಳಿ ಕಡಿಮೆ ಸಮಯದಲ್ಲಿ ಈ ದೇಶಗಳನ್ನು ತಲುಪುತ್ತವೆ. ಹಾಗಾಗಿ, ಅದರ ರುಚಿ ತಾಜಾವಾಗಿಯೇ ಉಳಿಯುತ್ತದೆ.

 ಆದರೆ, ಭಾರತದಲ್ಲಿ ಈರುಳ್ಳಿ ಬೆಲೆ 100 ಕೆಜಿಗೆ 4,500 ರೂಪಾಯಿ ತಲುಪಿದಾಗ ಕಳೆದ ರವಿವಾರ ಭಾರತ ಈರುಳ್ಳಿ ರಫ್ತನ್ನು ನಿಷೇಧಿಸಿತು. ನಿಷೇಧದ ಬಳಿಕ ಬಾಂಗ್ಲಾದೇಶದಂಥ ದೇಶಗಳು ಮ್ಯಾನ್ಮಾರ್, ಈಜಿಪ್ಟ್, ಟರ್ಕಿ ಮತ್ತು ಚೀನಾಗಳ ಕಡೆ ಮುಖ ಮಾಡಿತು.

ಮಾರ್ಚ್ 31ಕ್ಕೆ ಕೊನೆಗೊಂಡ 2018-19ರ ಆರ್ಥಿಕ ವರ್ಷದಲ್ಲಿ ಭಾರತ 22 ಲಕ್ಷ ಟನ್ ಈರುಳ್ಳಿ ರಫ್ತು ಮಾಡಿದೆ ಎಂದು ಭಾರತದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಂಕಿಅಂಶಗಳು ತಿಳಿಸಿವೆ. ಇದು ಏಶ್ಯದ ದೇಶಗಳು ಮಾಡಿಕೊಳ್ಳುವ ಎಲ್ಲ ಆಮದುಗಳ ಅರ್ಧಕ್ಕಿಂತಲೂ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News